ಬೆಂಗಳೂರು : ಶಾಲೆಗಳು ಪ್ರಾರಂಭವಾಗಿರುವುದರಿಂದ ಮಕ್ಕಳಿಗೆ ನಿಜವಾದ ಸ್ವಾತಂತ್ರ್ಯ ದೊರೆತಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಶಾಲೆಗಳು ಪನರಾರಂಭಗೊಂಡ ಪ್ರಥಮ ದಿನವಾದ ಇಂದು ಮಲ್ಲೇಶ್ವರಂ 18 ನೇಕ್ರಾಸ್ ನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯೆ ನೀಡಿದರು.
ಕೋವಿಡ್ 1 ಮತ್ತು 2ನೇ ಅಲೆಯಿಂದಾಗಿ ಮಕ್ಕಳಿಗೆ ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದೆ.ಶಿಕ್ಷಣದಲ್ಲಿ ಹಲವಾರು ಪ್ರಯೋಗಗಳಾಗಿದ್ದು,ಆನ್ ಲೈನ್ ಹಾಗೂ ಶಾಲಾ ಆವರಣದಲ್ಲಿ ಶಿಕ್ಷಣ ಕೊಡಲು ಪ್ರಯತ್ನಗಳು ನಡೆಸಿದ್ದೇವೆ.ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಪ್ರಯತ್ನ ಮಾಡಲಾಗಿದೆ.ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ.ಮಕ್ಕಳಿಗೆ ತೊಂದರೆಯಾಗದಂತೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ತಜ್ಞರ ಸಮಿತಿ ವರದಿಯಾಧರಿಸಿ ಕ್ರಮ : 15 ದಿನಗಳ ಹಿಂದೆಯೇ ಶಾಲೆಗಳನ್ನು ತೆರೆಯುವ ಬಗ್ಗೆ ಘೋಷಣೆ ಮಾಡಲಾಗಿತ್ತು.ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಸಚಿವರೂ ಸಹ ಶಾಲೆ ತೆರೆಯಲು ಪೂರ್ವ ಸಿದ್ಧತೆಗೆ ನಿರಂತರವಾಗಿ ಕಾರ್ಯಕ್ರಮ ರೂಪಿಸಿದ್ದಾರೆ.ಇಂದು ಇಲ್ಲಿನ ಪ್ರಾಂಶುಪಾಲರು , ವಿದ್ಯಾರ್ಥಿಗಳ ಜೊತೆಗೆ ಮಾತನಾಡಿದ್ದೇನೆ.ಈ ಬಗ್ಗೆ ಶಿಕ್ಷಕರು,ಪ್ರಾಂಶುಪಾಲರು ಸಂತೋಷವಾಗಿ ದ್ದಾರೆ.ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಭಾವನಾತ್ಮಕ ಸಂಬಂಧ ಬೆಸೆಯಲು ಇದು ಕಾರಣ ವಾಗಿದೆ ಎಂದರು.
ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಬೆರೆಯಲು ಸಾಧ್ಯವಾಗಿದೆ ಎಂದು ಮಕ್ಕಳು ಅಭಿಪ್ರಾಯಪಟ್ಟಿ ದ್ದಾರೆ.ಕಲಿಕೆ ಜ್ಞಾನ ಸಂಪಾದನೆಯ ಮಾರ್ಗ.ಮುಕ್ತ ವಾತಾವರಣ ನಿರ್ಮಾಣ ಮಾಡಿದರೆ ಮಾತ್ರ ಜ್ಞಾನ ಸಂಪಾದನೆ ಸಾಧ್ಯವಾಗುತ್ತದೆ.ಮಕ್ಕಳು ಓದಬೇಕು ಎಂದು ಕಿವಿ ಮಾತು ಹೇಳಿದ್ದೇನಲ್ಲದೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,ಸ್ಯಾನಿಟೈಸ್ ಮಾಡುವುದನ್ನು ಪಾಲಿಸಬೇಕು ಎಂದು ತಿಳಿಸಿದ್ದೇನೆ ಎಂದರು.
ಗಡಿ ಜಿಲ್ಲೆಗಳಲ್ಲಿ ಶಾಲೆಗಳ ಪ್ರಾರಂಭ: ಗಡಿ ಜಿಲ್ಲೆಗಳಲ್ಲಿ ಕೋವಿಡ್ 19ರ ಪ್ರಮಾಣ ಶೇ 2% ಕ್ಕಿಂತ ಕಡಿಮೆಯಾದಾಗ ಅಲ್ಲಿಯೂ ಶಾಲೆಗಳನ್ನು ಹಂತ ಹಂತವಾಗಿ ಪ್ರಾರಂಭ ಮಾಡಲಾಗುವುದು.
ಪ್ರಾಥಮಿಕ ಶಾಲೆಗಳ ಪ್ರಾರಂಭದ ಬಗ್ಗೆ ತಜ್ಞರ ಸಮಿತಿ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ನಿರ್ಮಲ ರಾಣಿ ಶಾಲೆಗೆ ಭೇಟಿ : ಮಲ್ಲೇಶ್ವರಂನ ನಿರ್ಮಲ ರಾಣಿ ಶಾಲೆಗೆ ಭೇಟಿ ನೀಡಿ ಮಾತ ನಾಡಿದ ಅವರು,ಸರ್ಕಾರ ಶಾಲೆಗಳ ಪ್ರಾರಂಭಕ್ಕೆ ಗಟ್ಟಿ ನಿರ್ಧಾರ ಕೈಗೊಂಡಿತು.ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ವಿಶೇಷ ಕಾಳಜಿ ಇದೆ ಎಂದರು.ಶಾಲೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆ ಜೊತೆಗೆ ಆರೋಗ್ಯ ತಪಾಸಣೆ ಮಾಡಬೇಕು.ಅಪೌಷ್ಟಿಕತೆ ಇದ್ದಲ್ಲಿ ಪೌಷ್ಟಿಕಾಂಶಗಳನ್ನು ನೀಡಲು ಕ್ರಮ ಕೈಗೊಳ್ಳಿ ಎಂದರು.
21ನೇ ಶತಮಾನ ಜ್ಞಾನದ ಯುಗ.ಜೀವನದ ಕೊನೆ ಉಸಿರಿರುವವರೆಗೂ ನಾವು ವಿದ್ಯಾರ್ಥಿಗಳೇ. ಕಲಿಕೆ ನಿರಂತರ ಪ್ರಕ್ರಿಯೆ.ಶಾಲೆಯಲ್ಲಿ ಕಲಿತು ಪರೀಕ್ಷೆ ಬರೆದರೆ.ಜೀವನದಲ್ಲಿ ಪರೀಕ್ಷೆಗೆ ಒಳಪಟ್ಟು ಕಲಿಯಬೇಕು.ತಾರ್ಕಿಕವಾಗಿ ಚಿಂತನೆ ಮಾಡುವುದನ್ನು ಕಲಿಯಬೇಕು ಎಂದ ಅವರು, ಏಕೆ,ಏನು,ಎಲ್ಲಿ,ಹೇಗೆ,ಎಷ್ಟು ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು.ಈ ಪ್ರಶ್ನೆಗಳು ಯಶಸ್ಸಿನ ಮಂತ್ರಗಳು.ಅದಕ್ಕೆ ಬರುವ ಉತ್ತರಗಳು ಶಾಶ್ವತವಾಗಿ ನೆನೆಪಿನಲ್ಲಿರುತ್ತವೆ.ನೀವು ನಮ್ಮ ದೇಶದ ಭವಿಷ್ಯ.ನೂತನ ಶಿಕ್ಷಣ ನೀತಿಯಿಂದ ಅವಕಾಶಗಳು ಹೆಚ್ಚಿವೆ ಎಂದರಲ್ಲದೆ ಆರೋಗ್ಯ ಕಾಪಾಡಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.