ರಾಷ್ಟ್ರೀಯ ಶಿಕ್ಷಣ ನೀತಿಯ ಅವಸರದ ಅನುಷ್ಠಾನ ಅಸಂವಿಧಾನಿಕ ಹಾಗು ಅಪಾಯಕಾರಿ : ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಆತಂಕ

ಬೆಂಗಳೂರು:ಸಂವಿಧಾನದ ಮೂಲ ಆಶಯವಾದ ಸಮಾಜವಾದಿ ಜಾತ್ಯತೀತ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣ ರಾಜ್ಯವನ್ನು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೂಲ ತಳಹದಿಯ ಮೇಲೆ ಕಟ್ಟಿ ಕೊಡಲು ಬುನಾದಿಯಾಗಬೇಕಾದ ಶಿಕ್ಷಣ ವ್ಯವಸ್ಥೆಯನ್ನು,ಒಕ್ಕೂಟ ಧರ್ಮದ  ಆಶಯದಂತೆ ರಾಜ್ಯದ ಅನನ್ಯತೆ ಹಾಗು ಅವಶ್ಯಕತೆಯ ನೆಲೆಯಲ್ಲಿ ರೂಪಿಸಿಕೊಳ್ಳುವ ಬದಲು,ಕೇವಲ ಪ್ರಚಾರ ಮತ್ತು ಪ್ರತಿಷ್ಠೆ ಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅವಸರ ಅವಸರವಾಗಿ ಜಾರಿ ಮಾಡುತ್ತಿರುವುದು ಅಪಾಯಕಾರಿ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜ ನಾರಾಧ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

ಸರ್ಕಾರದ ನಿರ್ಧಾರದ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಮಾರ್ಗ ಸೂಚಿ ಚೌಕಟ್ಟೇ ಹೊರತು ರಾಜ್ಯಗಳ ನೀತಿಯಾಗಲಾರದು.ರಾಜ್ಯ ಸರಕಾರಗಳು ತಮ್ಮ ಸಾಮಾಜಿಕ,ಆರ್ಥಿಕ ಮತ್ತು ಸಾಂಸ್ಕೃತಿಕ ಅಗತ್ಯಗಳಿಗೆ ಅನುಗುಣ ವಾಗಿ ಒಂದು ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳ ಬೇಕಾಗುತ್ತದೆ. ಸಂವಿಧಾನದಲ್ಲಿ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದ್ದು ಒಕ್ಕೂಟ ವ್ಯವಸ್ಥೆಯಲ್ಲಿ ಅದಕ್ಕೆ ಸಂವಿಧಾನ ಬದ್ಧ ಅವಕಾಶವಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಂದು ಮಾರ್ಗಸೂಚಿ ಚೌಕಟ್ಟಾಗಿ ಇಟ್ಟುಕೊಂಡು ಕರ್ನಾಟಕ ತನ್ನದೇ ಆದ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು(ಕರಾಶಿನೀ)ರೂಪಿಸಿ,ಎರಡೂ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆದು ಅಧಿಕೃತವಾಗಿ ಪ್ರಕಟಿಸಿ ಜಾರಿಗೊಳಿಸುವುದು ಪ್ರಜಾಸತ್ತಾತ್ಮಕ ವಿಧಾನ ಮತ್ತು ಕ್ರಮವಾಗಿದೆ.ಈ ನಿಟ್ಟಿನಲ್ಲಿ ಕೇರಳ ಹಾಗು ತಮಿಳನಾಡು ಸರಕಾರಗಳ ನಡೆ ಅನುಕರಣೀಯ ಎಂದು ಅವರು ತಿಳಿಸಿದ್ದಾರೆ.

ಇದೆಲ್ಲವನ್ನು ಗಾಳಿಗೆ ತೂರಿ ಮೂಲವಾರಸುದಾರರನ್ನು ಒಳಮಾಡಿ ಕೊಳ್ಳದ ತರಾತುರಿಯಲ್ಲಿ ಅನುಷ್ಠಾನ ಮಾಡುತ್ತಿರುವುದು ಸರ್ವಾಧಿಕಾರ ಹಾಗು ಸಂವಿಧಾನಬಾಹಿರ ಕ್ರಮವಾಗಿದೆ.ಕಳೆದ ಒಂದು ವರ್ಷದಿಂದ ಮೂಲವಾರಸುದಾರರು ನೀತಿಯ ಬಗ್ಗೆ ರಾಜ್ಯದ ಎಲ್ಲೆಡೆ ಚರ್ಚಿಸಲು ಕ್ರಮವಹಿಸಬೇಕೆಂದು ಒತ್ತಾಯಿಸುತ್ತಿರುವುದಕ್ಕೆ ಸರಕಾರ ಕಿಂಚಿತ್ತೂ ಮಾನ್ಯತೆ ನೀಡಿಲ್ಲ.ಮಿಗಿಲಾಗಿ,ಈ  ಕುರಿತಂತೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಸದನದಲ್ಲಿ ಹಾಗು ಸಂಬಂಧಿಸಿದ ಮೂಲವಾರ ಸುದಾರರು ಮತ್ತು ತಜ್ಞರ ಜೊತೆ ವಿಸ್ತೃತವಾಗಿ ಚರ್ಚಿಸಿದ ನಂತರವೇ ಜಾರಿಗೊಳಿಸಬೇಕು ಅವಸರ ಸಲ್ಲದು ಎಂದು ಪತ್ರ ಬರೆದಿದ್ದರೂ ಅದನ್ನೂ ಲೆಕ್ಕಿಸದೆ ಅನುಷ್ಠಾನ ಮಾಡ ಹೊರಟಿರುವುದು ಸರಕಾರದ ಸರ್ವಾಧಿಕಾರಿ ಹಾಗು ಏಕಪಕ್ಷೀಯ ಧೋರಣೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಕೇವಲ ಪ್ರಚಾರ ಪ್ರತಿಷ್ಠೆಗೋಸ್ಕರ ಶಿಕ್ಷಣ ನೀತಿಯನ್ನು ಜಾರಿಗೊಳಿಸದೆ ರಾಜ್ಯದ ಹಿತ,ಅನನ್ಯತೆ ಮತ್ತು ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳಿಗೆ ಅನು ಗುಣವಾಗಿ ಜಾರಿಗೊಳಿಸಲು ಅನುವಾಗುವಂತೆ ಅನುಷ್ಠಾನದ ಎಲ್ಲ ಪ್ರಕ್ರಿಯೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲು ಸೂಚಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಅವರು ಹೇಳಿ ದ್ದಾರೆ.ಜೊತೆಗೆ ,೨೦೧೭ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ಸರಕಾರೀ ಶಾಲೆಗಳ ಸಬಲೀಕರಣ  ವರದಿ  ಮತ್ತು ಇತರೆ ಸಮಿತಿಗಳು ಕಾಲಕಾಲಕ್ಕೆ ಸಲ್ಲಿಸಿರುವ ವರದಿಗಳನ್ನು ಆಧರಿಸಿ ಹಾಗು ರಾಷ್ಟ್ರೀಯ ಶಿಕ್ಷಣ ನೀತಿಯನ್ನು  ಕೇವಲ ಒಂದು ಚೌಕಟ್ಟಾಗಿ ಇಟ್ಟುಕೊಂಡು ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಎಲ್ಲ ಮೂಲವಾರಸುದಾರರನ್ನೊಳಗೊಂಡ ಉನ್ನತ ಸಮಿತಿಯನ್ನು ರಚಿಸಬೇಕೆಂದು ಆಗ್ರಹ ಪೂರ್ವಕವಾಗಿ ಅವರು ಆಗ್ರಹಿಸಿದ್ದಾರೆ.

More News

You cannot copy content of this page