ಬೆಂಗಳೂರು : ಖಾತೆ ಹಂಚಿಕೆ ಸೇರಿದಂತೆ ಇನ್ನಿತರ ವಿಚಾರಗಳಿಂದ ಕಳೆದ ಒಂದು ತಿಂಗಳಿಂದ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್, ಇಂದು ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುವುದರ ಮೂಲಕ ತಮ್ಮ ಕಾರ್ಯವನ್ನ ಆರಂಭಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಆನಂದ್ ಸಿಂಗ್ ಮಾತ್ರ ತಮಗೆ ನೀಡಿರುವ ಖಾತೆ ಚೆನ್ನಾಗಿಲ್ಲ ಎಂಬ ನೆಪಯೊಡ್ಡಿ ಅಧಿಕಾರ ಸ್ವೀಕರಿಸಲಿಲ್ಲ. ಸರಕಾರದ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗಿರಲಿಲ್ಲ.
ಮುಖ್ಯಮಂತ್ರಿ ಅವರು ಈ ಹಿಂದೆ ನಡೆಸಿದ್ದ ಸಂಧಾನ ಯಶಸ್ವಿಯಾಗಿರಲಿಲ್ಲ. ಆದರೆ ಇಂದಿನ ಮಾತುಕತೆ ಯಶಸ್ವಿಯಾಗಿದೆ.
ವಿಕಾಸಸೌಧದಲ್ಲಿರುವ ಕಚೇರಿಗೆ ಆಗಮಿಸಿದ ಆನಂದ್ ಸಿಂಗ್, ಅಧಿಕಾರಿಗಳ ಜೊತೆ ಸಭೆ ನಡೆಸಿ, ಸಲಹೆ,ಸೂಚನೆ ನೀಡಿದರು. ಸಭೆಗೂ ಮುನ್ನ ಆನಂದ್ ಸಿಂಗ್ ಮಾತನಾಡಿ, ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದೆ.
ಅವರಿಗೆ ನನ್ನ ಮನವಿ ತಲುಪಿಸಿದ್ದೇನೆ. ಸಿಎಂ ಕೂಡ ವರಿಷ್ಠರ ಜೊತೆ ಚರ್ಚಿಸುತ್ತೇನೆ ಎಂದಿದ್ದಾರೆ. ಹೀಗಾಗಿ ಪಕ್ಷ ಹಾಗೂ ಅವರ ಮಾತಿಗೆ ಬೆಲೆ ನೀಡಿ, ನಾನು ಇದೀಗ ಕೆಲಸವನ್ನ ಆರಂಭಿಸುತ್ತಿದ್ದೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಶಾಸಕ ರಾಜೂಗೌಡ ಅವರು ಆನಂದ್ ಸಿಂಗ್ ಅವರ ಕಚೇರಿಗೆ ಆಗಮಿಸಿ,ಸುದೀರ್ಘ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ, ಆನಂದ್ ಸಿಂಗ್ ಅವರೊಂದಿಗೆ ಮಾತನಾಡಿದ್ದೇನೆ, ಯಾವುದೇ ಗೊಂದಲವಿಲ್ಲ, ಎಲ್ಲಾವೂ ಬಗೆಹರಿದಿದೆ, ಅವರು ಸಂತೋಷವಾಗಿ ಅಧಿಕಾರ ಸ್ವೀಕರಿಸಿ, ಕೆಲಸ ಆರಂಭಿಸಲಿದ್ದಾರೆ ಎಂದು ಹೇಳಿದರು.
ನಾಳೆ ಸಿಎಂ ಕೂಡ ದೆಹಲಿಗೆ ತೆರಳುತ್ತಿದ್ದಾರೆ. ಅಲ್ಲಿ ವರಿಷ್ಠರ ಜೊತೆ ಎಲ್ಲಾ ವಿಚಾರ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದು ಹೇಳಿದರು.