ಬೆಂಗಳೂರು: ಮೈಸೂರು ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು,ಲಘುವಾಗಿ ಪರಿಗಣಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಕಾಸಸೌಧಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೈಸೂರು ಸಾಮೂಹಿಕ ಅತ್ಯಾಚಾರ ಘಟನೆ ನನಗೆ ನೋವು ತಂದಿದೆ.ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಇಂತಹ ಘಟನೆಗಳು ನಡೆದರೆ ಜನ ಸಹಜವಾಗಿ ಭಯ ಬೀಳುತ್ತಾರೆ.ನಿನ್ನೆ ಸಂಜೆ ವೇಳೆ ಯುವತಿ ಅಲ್ಲಿಗೆ ಹೋದಾಗ ದುರಾತ್ಮರು ಅವರನ್ನು ಬೆನ್ನಟ್ಟಿ ಹೋಗಿದ್ದಾರೆ.ಈ ಬಗ್ಗೆ ಪರಿಶೀನೆ ನಡೆಸಲು ನಾಳೆ ಮೈಸೂರು ತೆರಳುತ್ತಿದ್ದೇನೆ.ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ.ಈಗಾಗಲೇ ಎಫ್ಐಆರ್ ದಾಖಲಾಗಿದ್ದು,ಸಾಕಷ್ಟು ಮಾಹಿತಿ ಪಡೆದಿದ್ದೇನೆ.ಘಟನೆ ಹಿನ್ನಲೆಯಲ್ಲಿ ಉನ್ನತ ಅಧಿಕಾರಿಗಳನ್ನು ಮೈಸೂರಿಗೆ ಕಳುಹಿಸಿದ್ದೇವೆ.ಇದುವರೆಗೂ ಯಾರನ್ನೂ ಬಂಧಿಸಿಲ್ಲವೆಂದರು.
ಪ್ರಕರಣ ತನಿಖಾ ಹಂತದಲ್ಲಿರುವ ಹಿನ್ನಲೆಯಲ್ಲಿ ಹೆಚ್ಚಿನ ಮಾಹಿತಿ ಹೇಳಲು ಸಾಧ್ಯವಿಲ್ಲ.ಮೈಸೂರು ತುಂಬ ಶಾಂತವಾಗಿ ಇರುವಂತ ಪ್ರದೇಶ.ಜನ ನೆಮ್ಮದಿಯಿಂದ ಬದುಕ್ತಿದ್ದಾರೆ.ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ.ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದರು.
ಗಣೇಶ ಚತುರ್ಥಿ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೂರನೇ ಅಲೆ ಬರಲಿದೆ ಎನ್ನುವುದನ್ನು ತಜ್ಞರು ಹೇಳ್ತಿದ್ದಾರೆ.ಹೇಗೆ ಹಬ್ಬವನ್ನು ಆಚರಿಸಬೇಕು ಎನ್ನೋದನ್ನು ನಾವು ಕುಳಿತು ಚರ್ಚೆ ಮಾಡಿ ಮುಖ್ಯಮಂತ್ರಿ ಅವರ ಜೊತೆಗೂ ಚೆರ್ಚಿಸಿ ನಿರ್ಧರಿಸುತ್ತೇವೆ.ಹಬ್ಬಕ್ಕೆ ಅವಕಾಶ ಕೊಡಬೇಕು ಅಂತ ನಮ್ಮದೇ ಶಾಸಕರು ಒತ್ತಾಯ ಮಾಡು ತ್ತಿದ್ದಾರೆ.ಮೊದಲು ಜೀವ,ಆಮೇಲೆ ಉಳಿದದ್ದೆಲ್ಲ.ಇಡೀ ಹಬ್ಬವನ್ನು ಹತ್ತಿಕ್ಕುವ ಪ್ರಶ್ನೆಯೇ ಇಲ್ಲ.ಆಚರಣೆಗಾಗಿ ನಿಯಮವನ್ನು ಸಡಿಲಿಸ ಬೇಕೋ,ಬಿಗಿ ಗೊಳಿಸಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸಲಿದ್ದೇವೆ ಎಂದು ಹೇಳಿದರು.
ಆರ್ ಎಸ್ ಎಸ್ ನ ತಾಲಿಬಾನಿಗೆ ಹೋಲಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,ಕಾಂಗ್ರೆಸ್ ನವರಿಗೆ ಮಾತನಾಡಲು ಯಾವುದೇ ವಿಚಾರ ಇಲ್ಲ.ಮೋದಿ ಸರ್ಕಾರ ಬಂದ ಬಳಿಕ ಅವರಿಗೆ ಹೇಳಲು ಏನೂ ವಿಷಯವಿಲ್ಲ.ಅದಕ್ಕೆ ಏನೇನೋ ಹೇಳುತ್ತಾ ಇರುತ್ತಾರೆ.ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.ಅವರಿಗೆ ಆರ್ ಎಸ್ ಎಸ್ ಬಗ್ಗೆ ಮಾಹಿತಿ ಇಲ್ಲ ಎಂದು ತಿರುಗೇಟು ನೀಡಿದರು.