ಎಫ್ ಎಸ್ ಎಲ್ ಕೇಂದ್ರದ ಉನ್ನತೀಕರಣಕ್ಕೆ ಆದ್ಯತೆ – ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು – ಕ್ಲಿಷ್ಟಕರ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ಬೆಂಗಳೂರಿನ ನ್ಯಾಯ ವಿಜ್ಞಾನ ಪ್ರಯೋಗಾಲಯ ದೇಶದಲ್ಲೇ ಹೆಸರುವಾಸಿ. ಇದರ ಉನ್ನತೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಕೋರಮಂಗಲದ ಕೆ ಎಸ್‍ ಆರ್ ಪಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿನ ಶಿಶು ವಿಹಾರ ಹಾಗೂ  ಆಡಳಿತ ಕಚೇರಿಯ ಕಟ್ಟಡ ಉದ್ಘಾಟನೆ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಈ ವಿಷಯ ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ಸಂಚಾರಿ ಫೋರೆನ್ಸಿಕ್ ಪ್ರಯೋಗಾಲಯಗಳಿಗೂ ಕೂಡ ಚಾಲನೆ ನೀಡಲಾಗಿದೆ.

ಪೊಲೀಸರ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪೊಲೀಸ್ ಪಬ್ಲಿಕ್ ಶಾಲೆಗಳನ್ನು ಹೆಚ್ಚು ಹೆಚ್ಚಾಗಿ ಪ್ರಾರಂಭಿಸಲಾಗುವುದು. ನಾಗರಿಕರು ನೆಮ್ಮದಿಯ ಬದುಕು ನಡೆಸಲು ಹಗಲಿರುಳು ಪೊಲೀಸರು ಎಚ್ಚರವಾಗಿದ್ದು, ರಕ್ಷಣೆ ಮಾಡಬೇಕಾಗಿದೆ. ಆದ್ದರಿಂದ ಅವರ ಮಕ್ಕಳ ಯೋಗಕ್ಷೇಮವನ್ನು ಸರ್ಕಾರ ನೋಡಬೇಕಾಗಿದೆ ಎಂದರು.  

ಆಡುಗೋಡಿಯಲ್ಲಿ ಪೊಲೀಸ್ ಇಲಾಖೆಗೆ ಸೇರಿರುವ ನೂರು ಎಕರೆ ಜಾಗವಿದ್ದು, ಅಲ್ಲಿ ಮತ್ತೊಂದು ಪೊಲೀಸ್ ಪಬ್ಲಿಕ್ ಶಾಲೆ ಪ್ರಾರಂಭಿಸುವ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ರಾಷ್ಟ್ರದ ಗಡಿ ಕಾಯುವ ಸೈನಿಕರಿಗೆ ತಮ್ಮ ಶತ್ರುಗಳ ಬಗ್ಗೆ ಅರಿವಿರುತ್ತದೆ. ಆದರೆ, ನಾಡಿನಲ್ಲಿ ಸೇವೆ ಸಲ್ಲಿಸುವ ಪೊಲೀಸರಿಗೆ ಅಂಥಹ ಮಾಹಿತಿ ಇರುವುದಿಲ್ಲ. ಒಂದು ರೀತಿಯಲ್ಲಿ ಸವಾಲಿನ ಕೆಲಸವನ್ನು ಪೊಲೀಸರು ನಿಭಾಯಿಸಬೇಕಾಗಿದೆ. ಪೊಲೀಸರು ಮತ್ತು ಅವರ ಕುಟುಂಬದವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ರಾಜ್ಯದಲ್ಲಿ ಮಾದಕ ವಸ್ತು ಮುಲೋತ್ಪಾಟನೆ ಮಾಡಲು ನಿರ್ಧಾರ ಮಾಡಲಾಗಿದೆ.  ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ರಾಜ್ಯ ಅಪರ  ಪೊಲೀಸ್ ಮಹಾನಿರ್ದೇಶಕರಾದ ಅಲೋಕ್‍ಕುಮಾರ್, ಡಾ.ಎ.ಎಸ್.ಎನ್.ಮೂರ್ತಿ, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

More News

You cannot copy content of this page