ಬೆಂಗಳೂರು : ರಾಜ್ಯ ಸಚಿವ ಸಂಪುಟ ರಚನೆಯಾದ ಬಳಿಕ ಉಲ್ಬಣಿಸಿರುವ ಅಸಮಾಧಾನವನ್ನು ಹೋಗಲಾಡಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಬೂದಿಮುಚ್ಚಿದ ಕೆಂಡದಂತಿರುವ ಅಸಮಾಧಾನವನ್ನು ತಣಿಸಲು ಬೊಮ್ಮಾಯಿ ಎಷ್ಟೇ ಪ್ರಯತ್ನ ನಡೆಸಿದರೂ ಅಲ್ಪ ಮಟ್ಟಿನ ಯಶಸ್ಸು ಸಾಧಿಸಿದ್ದಾರೆ. ಈ ನಡುವೆ
ಮುಖ್ಯಮಂತ್ರಿ ಅವರ ನವದೆಹಲಿ ಭೇಟಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಮಧ್ಯಾಹ್ನ ನವದೆಹಲಿಗೆ ಪ್ರಯಾಣಿಸುವ ಮುಖ್ಯಮಂತ್ರಿ ಎರಡು ದಿನ ವಾಸ್ತವ್ಯ ಹೂಡಲಿದ್ದಾರೆ. ದೆಹಲಿ ಭೇಟಿ ವೇಳೆ ಕೇಂದ್ರ
ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಸೇರಿದಂತೆ ಕೇಂದ್ರ ಸಚಿವರನ್ನು ಸಿಎಂ ಭೇಟಿ ಮಾಡಲಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಬಹು ಮುಖ್ಯವಾದ ಸಭೆ ನಡೆಸಲಿರುವ ಅವರು ಕಾನೂನು ತಜ್ಞರೊಂದಿಗೆ ಚರ್ಚಿಸಲಿದ್ದಾರೆ. ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್, ರಾಜ್ಯದ ಹಿರಿಯ ವಕೀಲರು, ಕಾನೂನು ತಜ್ಞರು ಪಾಲ್ಗೊಳ್ಳಲಿರುವ ಈ ಸಭೆಯಲ್ಲಿ ಅಂತರರಾಜ್ಯ ಜಲವಿವಾದದ ಕುರಿತು ರಾಜ್ಯದ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಇದರ ನಡುವೆ ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಅವರ ಭೇಟಿ ಬಹಳಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ ಒಂದು ತಿಂಗಳಿಂದ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ವರಿಷ್ಠರಿಗೆ ಅವರು ಮಾಹಿತಿ ನೀಡಲಿದ್ದಾರೆ. ಅಂತೆಯೇ ಪ್ರಮುಖ ಖಾತೆಗಾಗಿ ಪಟ್ಟು ಹಿಡಿದಿರುವ ಸಚಿವರ ಖಾತೆ ಬದಲಾವಣೆ ಬಗ್ಗೆ ಚರ್ಚಿಸಿ ಸಲಹೆ ಪಡೆದುಕೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳ ಮೊದಲನೇ ಅಥವಾ ಎರಡನೇ ವಾರದಲ್ಲಿ ಅಸಮಾಧಾನಿತ ಸಚಿವರ ಖಾತೆಗಳ ಬದಲಾವಣೆಯಾಗುವ ಸಾಧ್ಯತೆಗಳು ಇದೆ ಎನ್ನಲಾಗಿದೆ. ಸಚಿವರಾದ ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಸೇರಿದಂತೆ ಇನ್ನಿತರರ ಖಾತೆಗಳು ಬದಲಾವಣೆಯಾಗುವ ಸಾಧ್ಯತೆಗಳಿವೆ.
ಉಳಿದ ನಾಲ್ಕು ಖಾತೆಗಳ ಭರ್ತಿ ಮಾಡಲು ಕೇಂದ್ರದ ವರಿಷ್ಠರ ಅನುಮತಿಯನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಬೊಮ್ಮಾಯಿ ಮಾಡುವ ಸಾಧ್ಯತೆ ಇದೆ. ಸೆಪ್ಟಂಬರ್ ೧೩ರಿಂದ ವಿಧಾನ ಮಂಡಲದ ಮುಂಗಾರ ಅಧಿವೇಶನಕ್ಕೂ ಮುನ್ನವೇ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡುವ ಅನಿವಾರ್ಯತೆ ಮುಖ್ಯಮಂತ್ರಿಗೆ ಎದುರಾಗಿದೆ.
ಈ ಮಧ್ಯೆ ಕಳೆದೊಂದು ತಿಂಗಳಿಂದ ಅಸಮಾಧಾನಗೊಂಡಿದ್ದ ಆನಂದ್ ಸಿಂಗ್ ನಿನ್ನೆ ವಿಧಾನಸೌಧದಲ್ಲಿ ಪ್ರತ್ಯಕ್ಷರಾಗಿ ಅಧಿಕಾರಿಗಳ ಸಭೆ ನಡೆಸಿ, ಇಲಾಖಾ ಕೆಲಸ ಕಾರ್ಯಾರಂಭ ಮಾಡಿದ್ದಾರೆ.
ಅಂತೆಯೇ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರ ಪುತ್ರ ವಿಜಯೇಂದ್ರ ಅವರ ವಿಚಾರವೂ ಚರ್ಚೆಗೆ ಬರಲಿದೆ. ಯಡಿಯೂರಪ್ಪ ಅವರ ರಾಜ್ಯ ಪ್ರವಾಸ, ವಿಧಾನ ಮಂಡಲದ ಅಧಿವೇಶನ ಸೇರಿದಂತೆ ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವೆ ಎನ್ನಲಾಗಿದೆ.