ವೇತನ ಕೇಳಿದ್ದಕ್ಕೆ 16 ಸಿಬ್ಬಂದಿಗೆ ಗೇಟ್‌ಪಾಸ್ ನೀಡಿದ ಬಿ.ಆರ್.ಶೆಟ್ಟಿ ಆಸ್ಪತ್ರೆ

ಉಡುಪಿ: ಉಡುಪಿಯಲ್ಲಿನ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನು ತಾನು ನಿರ್ವಹಿಸಲು ಪಡೆದು ಸಿಬ್ಬಂದಿ ತಮ್ಮ ವೇತನಕ್ಕಾಗಿ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಈಗಾಗಲೇ ಹಲವು ಸಿಬ್ಬಂದಿಗಳನ್ನು ವಜಾಗೊಳಿಸಿದ್ದರಿಂದ ಇನ್ನುಳಿದ ಸಿಬ್ಬಂದಿ ಕಂಗಾಲಾಗಿದ್ದಾರೆ.

ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಆಸ್ಪತ್ರೆಯ 16 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಸುಮಾರು ಹದಿನೈದಕ್ಕೂ ಹೆಚ್ಚು ಸಿಬ್ಬಂದಿ ಆಸ್ಪತ್ರೆಯ ಮುಂದೆ ಸಿಬ್ಬಂದಿಯನ್ನು ಏಕಾಏಕಿ ವಜಾಗೊಳಿಸಿದ್ದಕ್ಕೆ ಕಾರಣಕೇಳಿ ಪ್ರತಿಭಟನೆ ನಡೆಸುತ್ತಿದ್ದಾರೆ.   

ಕೆಲ ದಿನಗಳ ಹಿಂದೆ ಬಿ.ಆರ್.ಶೆಟ್ಟಿ ಆಸ್ಪತ್ರೆ ಸಿಬ್ಬಂದಿ ತಮಗೆ ಸರಕಾರದಿಂದ ಬರುತ್ತಿರುವ ಸಂಬಳವನ್ನಾದರೂ ಸರಿಯಾಗಿ ನೀಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಡೆಸಿದ್ದರಿಂದ ಆಸ್ಪತ್ರೆಯ ಆಡಳಿತ ಮಂಡಳಿ ನೌಕರರನ್ನು ವಜಾಗೊಳಿಸಿದೆ.

ಕೆಲಸ ಕಳೆದುಕೊಂಡವರ ಬೆಂಬಲಕ್ಕೆ ಇತರ ಸಿಬ್ಬಂದಿ ಸಾಥ್ ನೀಡಿದ್ದು ಆಸ್ಪತ್ರೆಯ ಮೇಲಧಿಕಾರಿಗಳಿಗೆ ಮುತ್ತಿಗೆ ಹಾಕಿ ಉತ್ತರ ನೀಡಿ ಎಂದು ಆಗ್ರಹಿಸಿದ್ದಾರೆ. ಉಡುಪಿ ನಗರ ಪೊಲೀಸರು ಮಧ್ಯ ಪ್ರವೇಶಿಸಿ, ವಿಕೋಪಕ್ಕೆ ತೆರಳುತ್ತಿದ್ದ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದರ ನಡುವೆ ಸ್ಥಳೀಯ ಶಾಸಕ ರಘುಪತಿ ಭಟ್ ಆಸ್ಪತ್ರೆ ಸಿಬ್ಬಂದಿಯನ್ನು ಮಾತುಕತೆಗೆ ಕರೆದಿದ್ದಾರೆ. ಆದ್ರೆ ಪಟ್ಟು ಬಿಡದ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಆಸ್ಪತ್ರೆಯ ನಿರ್ವಹಣೆ ಕಷ್ಟಸಾಧ್ಯ –ರಘಪತಿ ಭಟ್

ಸರ್ಕಾರದ ಹೆರಿಗೆ ಆಸ್ಪತ್ರೆಯನ್ನು ತಾನು ನಿರ್ವಹಣೆ ಮಾಡುತ್ತೇನೆ ಎಂದು ಉದ್ಯಮಿ ಬಿ.ಆರ್. ಶೆಟ್ಟಿ ಪಡೆದುಕೊಂಡಿದ್ದರು. ಇದನ್ನು ಉನ್ನತೀಕರಣಗೊಳಿಸಲು ಸಾಕಷ್ಟು ಹಣ ಖರ್ಚು ಮಾಡಿದ್ದರು. ಒಪ್ಪಂದದ ಪ್ರಕಾರ 200 ಬೆಡ್​ನ ಈ ಸರ್ಕಾರಿ ಆಸ್ಪತ್ರೆಯನ್ನು ಬಿ ಆರ್ ಶೆಟ್ಟಿ ಅವರಿಗೆ ನೀಡಲಾಗಿತ್ತು. ಆದರೆ ಬಿ ಆರ್ ಶೆಟ್ಟಿ ಅವರ ಸಾಮ್ರಾಜ್ಯ ಸಾಕಷ್ಟು ಸಮಸ್ಯೆಯಲ್ಲಿ ಸಿಲುಕಿದೆ. ತಮಗೆ ಈ ಆಸ್ಪತ್ರೆ ನಡೆಸಲು ಸಾಧ್ಯವಿಲ್ಲ ಎಂದು ಅವರು ಈಗ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೀಗಾಗಿ ಆಸ್ಪತ್ರೆಯ 250 ಸಿಬ್ಬಂದಿಗಳಿಗೆ  ಸಂಬಳ ಕೊಡದ ಸ್ಥಿತಿಗೆ ಆಸ್ಪತ್ರೆಯ ಆಡಳಿತಮಂಡಳಿ ಬಂದು ತಲುಪಿದೆ.

ಈ ಹಿಂದೆ ಸರ್ಕಾರದ ನಿರ್ವಹಣೆಯಲ್ಲಿ 70 ಬೆಡ್​ನ ಹೆರಿಗೆ ಆಸ್ಪತ್ರೆ ಸುಸಜ್ಜಿತವಾಗಿಯೇ ನಡೆಯುತ್ತಿತ್ತು. ಆದರೆ ತನ್ನ ತಂದೆ-ತಾಯಿಯ ಹೆಸರಲ್ಲಿ ತವರು ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಿಸುವ ಬಿ ಆರ್ ಶೆಟ್ಟಿ ಅವರ ಕನಸು ನನಸಾಯಿತು. ಆದರೆ ಇದುಬಹು ದಿನಗಳ ಕಾಲ ಉಳಿಯಲಿಲ್ಲ. ಅವರ ಸಾಮ್ರಾಜ್ಯ ಅಲುಗಾಡಲು ಆರಂಭವಾಗುತ್ತಿದ್ದಂತೆಯೇ ಈ ಆಸ್ಪತ್ರೆಯ ಸಿಬ್ಬಂದಿಗೂ ಸಂಬಳ ಸಿಗುತ್ತಿಲ್ಲ. ಕೂಸಮ್ಮ ಶಂಭು ಶೆಟ್ಟರ ಹೆಸರಲ್ಲಿ 200 ಬೆಡ್​ನ ಆಸ್ಪತ್ರೆಯೂ ನಿರ್ಮಾಣ ಆಗಿತ್ತು ಮತ್ತು ಕೇವಲ ಎರಡುವರೆ ವರ್ಷದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವಾತಾವರಣದಲ್ಲಿ 10 ಸಾವಿರ ಬಡ ಮಹಿಳೆಯರ ಹೆರಿಗೆಯನ್ನೂ ನಡೆಸಲಾಗಿತ್ತು. ಆದರೆ ಈಗ ಬಿ.ಆರ್. ಎಸ್ ಗ್ರೂಪ್ ಹಿಂದಕ್ಕೆ ಸರಿದಿದೆ. ತಿಂಗಳಿಗೆ 15 ಲಕ್ಷ ಕರೆಂಟ್ ಬಿಲ್ ಸೇರಿದಂತೆ 25 ಲಕ್ಷ ನಿರ್ವಹಣಾ ವೆಚ್ಚ ತಗಲುವ ಆಸ್ಪತ್ರೆಯನ್ನು ಸರ್ಕಾರದಿಂದಲೂ ನಿರ್ವಹಿಸಲು ಸಾಧ್ಯವಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಬಡವರ ಜೀವನಾಡಿಯಾಗಿದ್ದ ಈ ಹೆರಿಗೆ ಆಸ್ಪತ್ರೆ ಇಂದು ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದೆ. ಸರ್ಕಾರದ ಮಧ್ಯೆಪ್ರವೇಶದಿಂದ ಈಸಮಸ್ಯೆ ಬಗೆಹರಿಯಬೇಕಾಗಿದೆ.

More News

You cannot copy content of this page