ಬೆಂಗಳೂರು : ದೂರದ ಸ್ಥಳಗಳಿಂದ ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳು ಸಮಯಕ್ಕೆ ಸರಿಯಾಗಿ ತಲುಪಲು ಅನುಕೂಲವಾಗುವಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಕೆಎಸ್ ಆರ್ಟಿಸಿ ಬಸ್ಗಳು ಸಂಚರಿಸಲಿವೆ.ಈ ಬಗ್ಗೆ ಸಂಬಂಧಪಟ್ಟ ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಪ್ರೌಢ ಶಾಲೆ 9 ಮತ್ತು 10ನೇ ತರಗತಿಗಳು,ಪಿಯು ತರಗತಿಗಳು ಪುನಾರಂಭವಾಗಿದ್ದು,ಹಾಜರಾಗುವ ಮಕ್ಕಳ ಸಂಖ್ಯೆ ದಿನೇ ದಿನೇ ಏರುತ್ತಿದೆ.ಹೀಗಾಗಿ,ರಾಜ್ಯದ ಹಲವು ಭಾಗಗಳಲ್ಲಿ ಶಾಲೆ ಸಮಯಕ್ಕೆ ಬಸ್ಗಳು ಸಂಚರಿಸುವುದು ಅತ್ಯಗತ್ಯವಾಗಿದೆ.ಕೋವಿಡ್ ಲಾಕ್ಡೌನ್ ಪೂರ್ವದಲ್ಲಿ ಶಾಲಾ ಅವಧಿಗೆ ಸರಿಯಾಗಿ ಮಕ್ಕಳು ತಲುಪುವಂತೆ ಬಸ್ ಸಂಚರಿಸುತ್ತಿದ್ದವು.ಈಗ ಅದೇ ರೀತಿ ಬಸ್ಗಳು ಸಮಯಕ್ಕೆ ಸರಿಯಾಗಿ ಸಂಚರಿಸಬೇಕು ಎಂದು ಅವರು ಸೂಚಿಸಿದರು.
ತರಗತಿಗಳ ಅವಧಿಗೆ ಸರಿಯಾಗಿ ಬಸ್ ಸಂಚಾರದಿಂದ ಮಕ್ಕಳ ಹಾಜರಾತಿ ಇನ್ನಷ್ಟು ಹೆಚ್ಚಳವಾಗುತ್ತದೆ.ಬಸ್ಗಳಲ್ಲಿ ಸಂಚರಿಸುವ ಮಕ್ಕಳು ಕೋವಿ ಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.ಮಕ್ಕಳು ಸುರಕ್ಷತಾ ಕ್ರಮಗ ಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸಲಹೆ,ಸೂಚನೆಗಳನ್ನು ನಿರ್ವಾಹಕರು ನೀಡುತ್ತಿರಬೇಕು ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಆನ್ಲೈನ್ ಶಿಕ್ಷಣದ ಅಗತ್ಯಕ್ಕೆ ತಕ್ಕಂತೆ ಪಠ್ಯವನ್ನು ಸಿದ್ದಪಡಿಸಿ ಆನ್ಲೈನ್ಗೆ ಅಪ್ಲೋಡ್ ಮಾಡಲಾಗಿತ್ತು.ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಮಕ್ಕಳಿಗೆ,ಪಾಲಕರಿಗೆ ತಿಳಿಸಲಾಗಿತ್ತು.ಹೀಗಾಗಿ, ಬಹುತೇಕ ಮಕ್ಕಳು ಆನ್ಲೈನ್ನಲ್ಲೇ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಸಚಿವರು ತಿಳಿಸಿದರು.
ಶಾಲೆಗಳ ಮುಖ್ಯ ಶಿಕ್ಷಕರಿಗೆ,ಆಡಳಿತ ಮಂಡಳಿಗಳಿಗೆ ಪಠ್ಯ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.