ಗ್ಯಾಂಗ್ ರೇಪ್ ಪ್ರಕರಣ : ವಿಡಿಯೋ ಚಿತ್ರೀಕರಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದ ಕಿರಾತಕರು

ಮೈಸೂರು : ಮೈಸೂರಿನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿದೆ. ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರದ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತ ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದಾಗ ಕಿರಾತಕರು ತಮ್ಮ ಮೊಬೈಲ್​ನಲ್ಲಿ ದೃಶ್ಯಾವಳಿಗಳನ್ನು ರೆಕಾರ್ಡ್​ ಮಾಡಿದ್ದಾರೆ ಎನ್ನಲಾಗಿದೆ.

ನಂತರ ಇದೇ ವಿಡಿಯೋ ತೋರಿಸಿ, ಮೂರು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಾಣ ರಕ್ಷಣೆಗಾಗಿ ಹಣ ಕೊಡಲು ಸಂತ್ರಸ್ತೆ ಹಾಗೂ ಆತನ ಸ್ನೇಹಿತ ಒಪ್ಪಿಕೊಂಡಿದ್ದರು‌. ಆದರೆ, ಮಧ್ಯರಾತ್ರಿಯಾದರೂ ಹಣ ಸಂಗ್ರಹಿಸಲು ಸಾಧ್ಯವಾಗದಿದ್ದಾಗ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಹಾಗೂ ಆಕೆಯ ಸ್ನೇಹಿತನನ್ನು ಕಲ್ಲಿನಿಂದ ಹಲ್ಲೆ‌ ಮಾಡಿ, ಇಬ್ಬರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸದ್ಯಕ್ಕೆ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ಬಗ್ಗೆ ಸಂತ್ರಸ್ತೆಯ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಲ್ಲರೂ ಚೆನ್ನಾಗಿ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ.

ಘಟನಾ ಸ್ಥಳದಲ್ಲಿ ಬಿಯರ್ ಬಾಟಲ್​ಗಳು ದೊರೆತಿದ್ದು, ಕೆಲವರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೃತ್ಯ ನಡೆಸಿದವರು ಸ್ಥಳೀಯರೇ ಎನ್ನಲಾಗಿದ್ದು, ಎಲ್ಲರೂ 20 ರಿಂದ 30 ವರ್ಷ ವಯಸ್ಸಿನ ಯುವಕರಾಗಿದ್ದು, ಕನ್ನಡದಲ್ಲೇ ಮಾತನಾಡುತ್ತಿದ್ದರು ಎಂದು ಯುವತಿಯ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ.

More News

You cannot copy content of this page