ಬೆಂಗಳೂರು : ಮೈಸೂರು ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಘಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನವರು ತಮ್ಮನ್ನೇ ರೇಪ್ ಮಾಡುತ್ತಿದ್ದಾರೆಂದು ಬೆಳಗ್ಗೆ ನೀಡಿದ್ದ ಹೇಳಿಕೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಾಪಸ್ ಪಡೆದಿದ್ದಾರೆ.ಹೇಳಿಕೆ ನೀಡಿದಕ್ಕಾಗಿ ವಿಷಾದ ವ್ಯಕ್ತಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಇಂದು ಬೆಳಗ್ಗೆ ಕಾರಾಗೃಹ ಇಲಾಖೆ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ,ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಹೊಣೆ ಹೊತ್ತು ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹದ ಬಗ್ಗೆ ಪ್ರತಿಕ್ರಿಯಿಸುತ್ತಾ,ಘಟನೆ ನಡೆದಿರುವ ಬಗ್ಗೆ ನಮಗೂ ಬೇಸರ ಇದೆ.ಆದರೆ ಕಾಂಗ್ರೆಸ್ ನಾಯಕರು ಗೃಹ ಸಚಿವರನ್ನೇ ಅತ್ಯಾಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ.ವಿದ್ಯಾರ್ಥಿನಿಯು ಸಂಜೆ ವೇಳೆ ನಿರ್ಜನ ಪ್ರದೇಶಕ್ಕೆ ತೆರಳಬಾರದಿತ್ತು.ಅಲ್ಲಿಗೆ ಏಕೆ ಹೋಗಿದ್ದರು ಎಂಬುದನ್ನು ಹೇಳಲು ಸಾಧ್ಯವಿಲ್ಲ,ಯಾಕೆ ಹೋಗಬಾರದು ಎಂದು ಪ್ರಶ್ನಿಸಲು ಸಾಧ್ಯವಿಲ್ಲವೆಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ನಾಯಕರು ಹಾಗೂ ಸಾರ್ವಜನಿ ಕವಾಗಿ ಆಕ್ಷೇಪ ಕೇಳಿ ಬಂದ ಹಿನ್ನಲೆಯಲ್ಲಿ ಮೈಸೂರಿಗೆ ತೆರಳುವ ಮುನ್ನ ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವುದಾಗಿ ಹಾಗೂ ಹೇಳಿಕೆ ನೀಡಿದ್ದರಿಂದ ಬೇಸರವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.ಈ ವಿವಾದವನ್ನು ಮುಂದುವರೆಸುವುದು ಬೇಡ.ಇದನ್ನು ಇಲ್ಲಿಯೇ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.ಪ್ರಕರಣದ ತನಿಖೆಗೆ ಯುವತಿ ಮತ್ತು ಯುವಕನ ಹೇಳಿಕೆ ಅತಿ ಮುಖ್ಯವಾಗಿದೆ.ಆದರೆ ಅವರಿಬ್ಬರೂ ಶಾಕ್ ನಿಂದ ಹೊರ ಬಂದಿಲ್ಲ. ಅವರ ಹೇಳಿಕೆ ತನಿಖೆಗೆ ಪ್ರಮುಖ ಸಾಕ್ಷ್ಯವಾಗಲಿದೆ.ನಮ್ಮ ಪೊಲೀಸರು ತಪ್ಪಿತಸ್ಥರನ್ನ ಪತ್ತೆ ಹಚ್ಚುವ ವಿಶ್ವಾಸವಿದೆ.ಅಲ್ಲಿವರೆಗೂ ತನಿಖಾಧಿಕಾರಿಗಳು ವಿಶ್ರಮಿಸುವುದಿಲ್ಲ.ಯುವತಿಯನ್ನು ತಮ್ಮ ಮಗಳ ಸ್ಥಾನದಲ್ಲಿ ನೋಡುತ್ತಿದ್ದೇನೆ. ಆತಂಕದಿಂದ ಆ ಮಾತು ಹೇಳಿದ್ದೇನೆ ಅಷ್ಟೇ ಹೊರತು ಅಸಹಾಯಕತೆಯಲ್ಲ.ಈ ಬಗ್ಗೆ ಎಲ್ಲರಲ್ಲಿಯೂ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಈ ವಿವಾದವನ್ನು ಇಲ್ಲಿಗೆ ಬಿಟ್ಬಿಡಿ.ವಿರೋಧ ಪಕ್ಷವಾಗಿ ಕಾಂಗ್ರೆಸ್ ಹೇಳಿಕೆ ನೀಡ್ತಿದ್ದಾರೆ.ಅದರ ಬಗ್ಗೆ ನಾನೇನು ಮಾತಾನಾಡುವುದಿಲ್ಲ.ಕಾಂಗ್ರೆಸ್ ನಾಯಕರಿಗೆ 2014ರಲ್ಲಿ ನಡೆದ ಪ್ರಕರಣ ನೆನಪು ಮಾಡುವುದಕ್ಕೆ ಇಚ್ಚಿಸುತ್ತೇನೆ.ಮತ್ತೇನು ಹೆಚ್ಚಿಗೆ ಮಾತನಾಡುವುದಿಲ್ಲ.ಯಾರ ಬಗ್ಗೆನೂ ಕೆಟ್ಟದಾಗಿ ಹೇಳಿಲ್ಲವೆಂದು ವಿಷಾದದಿಂದಲೇ ಮೈಸೂರಿಗೆ ತೆರಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಿತ ಹೇಳಿಕೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೃಹ ಸಚಿವರಿಗೆ ಕರೆ ಮಾಡಿ ಹೇಳಿಕೆ ವಾಪಸ್ ಪಡೆಯುವಂತೆ ಹಾಗೂ ವಿಷಾದ ವ್ಯಕ್ತಪಡಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ.