ಬೆಂಗಳೂರು : ಕಾರಾಗೃಹಗಳಲ್ಲಿ ಯಾವುದೇ ತರಹದ ಅಕ್ರಮ ಚಟುವಟಿಕೆಗಳು ಹಾಗೂ ಭ್ರಷ್ಟಾಚಾರ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಕಾರಾಗೃಹ ಕಚೆರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.ಕಾರಾಗೃಹಗಳಲ್ಲಿ ಅನಧಿಕೃತ ವಾಗಿ ಹಾಗೂ ಕಾನೂನು ಬಾಹಿರವಾಗಿ ಕೈದಿಗಳು ಮಾದಕ ವಸ್ತುಗಳನ್ನು ಪಡೆದು ಕೊಳ್ಳು ತ್ತಿರುವ ಹಾಗೂ ಹೊರ ಜಗತ್ತಿನೊಂದಿಗೆ ವ್ಯವಹರಿಸಲು ಫೋನ್ ಸೌಲಭ್ಯ ಮೂಲಕ ಸಂಪರ್ಕ ಸಾಧಿಸಿ ಹಣ ಸುಲಿಗೆ ನಡೆಸುತ್ತಿರುವ ಘಟನೆಗಳನ್ನು ಉದಾಹರಿಸಿ,ಅಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು.
ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ನಡೆಸುವುದು ಕಂಡು ಬಂದರೆ ಇಬ್ಬರ ಮೇಲೂ ಕಠಿಣ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.ಜೈಲುಗಳ ಹಾಗೂ ಕೈದಿಗಳ ಸ್ವಚ್ಛತೆ ಬಗ್ಗೆ ಆದ್ಯತೆ ನೀಡಬೇಕು.ಪ್ರಸ್ತುತ ಕೈದಿಗಳನ್ನು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ನ್ಯಾಯಾಲಯಗಳ ಮುಂದೆ ಹಾಜರು ಪಡಿಸಲಾಗುವುದರಿಂದ ಸಣ್ಣ ಹಾಗೂ ತಾಲೂಕು ಮಟ್ಟದ ಕಾರಾಗೃಹ ಗಳನ್ನೂ ಜಿಲ್ಲಾ ಕಾರಾಗೃಹ ಗಳ ಜೊತೆಗೆ ಸಂಲಾಗ್ನ ಹೋಲಿಸಲು ಸಚಿವರು ಸಲಹೆ ನೀಡಿದರು.ಜಿಲ್ಲಾ ಕಾರಾಗೃಹ ಗಳ ಸಾಮರ್ಥ್ಯ ವನ್ನು ಹೆಚ್ಚಿಸಿ ಸಣ್ಣ ಜೈಲುಗಳನ್ನು ಮುಚ್ಚಬೇಕು ಎಂದು ಅವರು ನಿರ್ದೇಶನ ಕೊಟ್ಟರು.
ಕಾರಾಗೃಹಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ವೈಖರಿಯನ್ನು ಸ್ವತಃ ಕಣ್ಣಾರೆ ಕಂಡಿದ್ದೇನೆ, ಇದರಿಂದ ಕೈದಿಗಳ ದೃಷ್ಟಿಯಲ್ಲಿ ಪೊಲೀಸರು ಸಣ್ಣವರಾಗಬೇಡಿ.ಜೈಲಿನಿಂದ ಹೊರ ಬರುವಾಗ ಕೈದಿ ಪರಿವರ್ತನೆಗೊಂಡು ಸಮಾಜಕ್ಕೆಉತ್ತಮ ಕೊಡುಗೆ ನೀಡುವಂತಾಗೇಕು ಎಂದರು.
ಕರ್ನಾಟಕ ಕಾರಾಗೃಹ ಇಲಾಖೆ ಮುಖ್ಯಸ್ಥ ಅಲೋಕ್ ಮೋಹನ್ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಭಾಗಹಿಸಿದ್ದರು.