ರಾಯಚೂರು : ಕಲಿಯುಗದ ಕಾಮಧೇನು, ಶ್ರೀ ಕೃಷ್ಣ ಸುತ,ಭಕ್ತರ ಕಾರುಣ್ಯ ಸಿಂಧು ಗುರು ರಾಘವೇಂದ್ರ ರಾಯರ 350 ನೇ ಆರಾಧನಾ ಮಹೋತ್ಸವಕ್ಕೆ ಇಂದು ಕಳೆದ ಏಳು ದಿನಗಳಿಂದ ಮಠದಲ್ಲಿ ನಡೆದ ಅಪರೂಪದ ಸಪ್ತ ರಾತ್ರೋತ್ಸವ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರುಶನ ಪಡೆದು ಪಾವನರಾದರು.
ರಾಯರ ಮಠದಲ್ಲಿ ಇಂದು ನಡೆದ ಉತ್ತರಾಧನಾ,ಮಧ್ಯಾರಾಧನೆ,ಪೂರ್ವಾರಾಧನೆ ಮಹೋತ್ಸವದಲ್ಲಿ ಹತ್ತು ಹಲವು ಕಾರ್ಯಕ್ರಮಗಳು ನಡೆದಿತ್ತು, ಹಾಗೆಯೇ ಅಲ್ಲಿ ಸಂಭ್ರಮ ಕಳೆಕಟ್ಟಿತ್ತು. ಇಂದು ನಡೆದ ಉತ್ತರಾರಾಧನೆ ಹಿನ್ನಲೆ ಶ್ರೀ ಮಠದಲ್ಲಿ ಸುಪ್ರಭಾತ, ಭಜನೆ ಸಂಕೀರ್ತನೆ, ಬಳಿಕ ಶ್ರೀರಾಘವೇಂದ್ರತೀರ್ಥರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿತು. ಮಠದಲ್ಲಿ ಸೇರಿದ್ದ ಸಾವಿರಾರು ಭಕ್ತರುಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು.
ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರತೀರ್ಥರು, ಶ್ರೀರಾಘವೇಂದ್ರತೀರ್ಥರ ಮೂಲ ಬೃಂದಾವನಕ್ಕೆ ಮಂಗಳಾರತಿ ನೆರವೇರಿಸಿ ವಸಂತೋತ್ಸವಕ್ಕೆ ಚಾಲನೆ ನೀಡಿದರು.ರಾಯರು ವೃಂದಾವನಸ್ಥರಾದ ಮರುದಿನವನ್ನ ಉತ್ತರರಾಧಾನೆಯಾಗಿ ಆಚರಿಸಲಾಗುತ್ತೆ. ಆದ್ದರಿಂದ ಇಂದು ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಪ್ರಹ್ಲಾದ ರಾಜರ ಮೆರವಣಿಗೆ ನಡೆಯಿತು. ವಿವಿಧ ಬಣ್ಣಗಳನ್ನು ಬಳಸಿ ಓಕುಳಿಯಾಡುವ ಮೂಲಕ ವಸಂತೋತ್ಸವದಲ್ಲಿ ಪಾಲ್ಗೊಂಡರು.
ಈ ವೇಳೆ ಶ್ರೀಗಳು ಸೇರಿ ಶ್ರೀಮಠದ ಹಿರಿಯ ಅಧಿಕಾರಿಗಳು,ಸಿಬ್ಬಂದಿಗೆ ಬಣ್ಣ ಎರಚಿ ಸಂಭ್ರಮಿಸಿದ್ರು.ನಂತರ ಶ್ರೀಮಠದ ಪ್ರಾಕಾರದಲ್ಲಿ ಪ್ರಹ್ಲಾದರಾಜರ ಉತ್ಸವಮೂರ್ತಿಯನ್ನು ಮೆರವಣಿಗೆಯೊಂದಿಗೆ ಮಹಾರಥದ ಬಳಿ ಕರೆದೊಯ್ಯಲಾಯಿತು.. ಬಳಿಕ ಪೀಠಾಧಿಪತಿಗಳು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ,ಆರಾಧನಾ ಮಹೋತ್ಸವದ ಮಹಾರಥೋತ್ಸವದ ಯಶಸ್ಸಿಗೆ ಪ್ರಾರ್ಥಿಸಿದರು.