ಮೈಸೂರು: ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ದಕ್ಷತೆಯನ್ನು ಮೆರೆದು ಸಮಾಜ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕಲು ಶ್ರಮಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಲ್ಲಿ ಕರೆ ನೀಡಿದರು.
ಮೈಸೂರಿನ ಪೊಲೀಸ್ ಅಕಾಡಮಿಯಲ್ಲಿ ಪ್ರಶಿಕ್ಷಣ ಪಡೆಯುತ್ತಿರುವ ಸುಮಾರು 278 ಪ್ರೊಬೇಷನ ರಿ(ಸಿವಿಲ್)ಸಬ್ ಇನ್ಸ್ಪೆಕ್ಟರ್ ಗಳನ್ನು ಉದ್ದೇಶಿಸಿ ಮಾತನಾಡಿದರು.ಸಾವಿರಾರು ಮಂದಿಯ ತ್ಯಾಗ ಬಲಿದಾನಗಳಿಂದ ನಾವು ಸ್ವಾತಂತ್ರ್ಯವನ್ನ ಪಡೆದಿದ್ದು ಅವರು ಕಂಡ ಕನಸುಗಳನ್ನ ಸಾಕಾರ ಗೊಳಿಸಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಕಿವಿಮಾತು ಹೇಳಿದರು.
ಸಾರ್ವಜನಿಕ ಸೇವೆಯಲ್ಲಿರುವ ತಾವುಗಳು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಗೌರವ ಹಾಗೂ ವರ್ಚಸ್ಸು ಬೆಳೆಯಲು ಸಹಕಾರ ವಾಗಲಿದೆ.ನಿಮ್ಮಿಂದ ಜನರ ನೆಮ್ಮದಿಯ ಬದುಕಿಗೆ ಆಶ್ರಯ ನೀಡುವ ಕೆಲಸ ಆಗಬೇಕು.ಅಪರಾಧಿ ಜಗತ್ತಿನ ಜೊತೆಗೆ ಕೆಲವು ಪೊಲೀಸರು ಅಪ್ರತ್ಯಕ್ಷವಾಗಿ ಗುರುತಿಸಿ ಕೊಂಡ ಉದಾಹರಣೆಗಳು ಇದ್ದು ಅದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿ ಹೇಳಿದರು.
ಪೊಲೀಸ್ ಅಕಾಡಮಿಯ ಮುಖ್ಯಸ್ಥರು,ಪ್ರಿನ್ಸಿಪಾಲರು ಹಾಗೂ ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.