ಕಲಬುರಗಿ : ಶತಾಯಗತಾಯ ಈ ಬಾರಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಪೂರ್ಣ ಬಹುಮತ ದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲೇಬೇಕೆಂದು ಪಣತೊಟ್ಟಿರುವ ಸಚಿವ ಹಾಗೂ ಚುನಾವಣಾ ಉಸ್ತುವಾರಿ ಮುರುಗೇಶ್ ನಿರಾಣಿ ನಗರದಾದ್ಯಂತ ಮಿಂಚಿನ ಪ್ರಚಾರ ನಡೆಸಿದರು.
ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ ಚುನಾವಣಾ ಅಖಾಡಕ್ಕೆ ಧುಮುಕಿದ ಅವರು ಬೆಳಗ್ಗಿನಿಂದ ಸಂಜೆವರೆಗೂ ನಗರದ ಪ್ರಮುಖ ವಾರ್ಡ್ಗಳಲ್ಲಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು.ಪಕ್ಷದ ಉಪಾಧ್ಯಕ್ಷ ನಿರ್ಮಲ್ಕುಮಾರ್ ಸುರಾನ,ಚುನಾವಣಾ ಉಸ್ತುವಾರಿ ಎನ್.ರವಿಕುಮಾರ್,ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ್ ತೇಲ್ಕೂರ್,ಬಸವರಾಜ ಮತ್ತಿಮೋಡ್,ಡಾ.ಅವಿನಾಶ್ ಜಾಧವ್,ವಿಧಾಪರಿಷತ್ ಸದಸ್ಯರಾದ ಜಿ.ಟಿ.ಪಾಟೀಲ ಮತ್ತಿತರರು ಅವರಿಗೆ ಸಾಥ್ ನೀಡಿದರು.
ವಾರ್ಡ್ ನಂಬರ್ 6ರ ಅಭ್ಯರ್ಥಿ ಅರುಣಾ ಬಾಯಿ ಅವರ ಪರವಾಗಿ ಪ್ರಚಾರ ಆರಂಭಿಸಿದ ನಿರಾಣಿಕೆಲವು ಕಡೆ ಮನೆ ಮನೆಗೆ ತೆರಳಿ ಖುದ್ದು ಮತ ಯಾಚಿಸಿದರು.ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ದಲ್ಲಿರುವುದರಿಂದ ಪಾಲಿಕೆಯಲ್ಲ ನಮ್ಮ ಪಕ್ಷವೇ ಅಧಿಕಾರಕ್ಕೆ ಬಂದರೆ ಕಲಬುರಗಿ ನಗರದ ಅಭಿವೃದ್ಧಿಗೆ ಅನುಕೂಲವಾಗುತ್ತದೆ.ದೀರ್ಘ ಕಾಲ ದಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಆದಷ್ಟು ಶೀಘ್ರ ಅನು ಷ್ಠಾನಗೊಳಿಸುವ ಆಶ್ವಾಸನೆ ನೀಡಿದರು.
ನಗರೋತ್ಥಾನ ಯೋಜನೆಯಡಿ ನಗರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ರಾಜ್ಯದಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇರುವುದರಿಂದ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ಕಾಯಕಲ್ಪ ನೀಡಬಹು ದು.ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಆಶೀರ್ವದಿಸುವಂತೆ ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ನಾನು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಖ್ಯವಾಗಿ ಕೋವಿಡ್ ನಿಯಂತ್ರಣ ಮಾಡಿರುವುದು,ಅರ್ಹರಿಗೆ ಲಸಿಕೆ ವಿತರಣೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿದ್ದೇವೆ.ಮುಂದೆ ನಮ್ಮ ಪಕ್ಷ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುವುದಾಗಿ ಆಶ್ವಾಸನೆ ನೀಡಿದರು.