ಬೆಂಗಳೂರು : 20 ರ ವಯೋಮಿತಿಯ ಭಾರತ ಮಿಶ್ರ ರಿಲೇ ತಂಡವು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ.ಈ ತಂಡದಲ್ಲಿದ್ದ ರಾಜ್ಯದ ತುಮಕೂರಿನ ಪ್ರಿಯಾ ಮೋಹನ್ ರಾಜ್ಯ ಸರ್ಕಾರದಿಂದ 5 ಲಕ್ಷ ರೂ ನಗದು ಪುರಸ್ಕಾರ ನೀಡ ಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಘೋಷಿಸಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಭಾರತೀಯರ ಸಾಧನೆ ಅಪಾರ.ನಮ್ಮ ರಾಜ್ಯದ ಯುವ ಪ್ರತಿಭೆಗಳೂ ಸಹ ಇಂದು ಸಾಧನೆ ಮಾಡುತ್ತಿದ್ದಾರೆ.ಅವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ರಾಜ್ಯ ಸರ್ಕಾರದಿಂದ ಮಾಡಬೇಕಿದೆ. ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೀಗ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಭಾರತೀಯ ತಂಡವು ಅಭೂತಪೂರ್ವ ಸಾಧನೆಯನ್ನು ಮಾಡಿದೆ.ಇದು ಇನ್ನೂ ಅನೇಕರಿಗೆ ಸ್ಪೂರ್ತಿಯಾಗಬೇಕಿದೆ.ಹೀಗಾಗಿ ತಂಡದಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಎ.ಮೋಹನ್ ಅವರ ಮಗಳು ಪ್ರಿಯಾ ಮೋಹನ್ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ರೂ. 5 ಲಕ್ಷ ನಗದು ನೀಡಿ ಪುರಸ್ಕರಿಸಲಾಗುವುದು.ನಾಳೆ ಕ್ರೀಡಾ ದಿನಾಚರಣೆ ಅಂಗವಾಗಿ ಕರ್ನಾಟಕ ಓಲಂಪಿಕ್ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪ್ರಿಯಾ ಮೋಹನ್ ಅವರನ್ನು ಸನ್ಮಾನಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.