ನಾವೆಲ್ಲಾ ಉಡುಪಿಯ ಶ್ರೀಕೃಷ್ಣನ ದೇಗುಲದಲ್ಲಿ ಕಡೆಗೋಲು ಹಿಡಿದ ಬಾಲಕೃಷ್ಣನನ್ನು ನೋಡಿ ಪುನೀತರಾಗಿದ್ದೇವೆ. ಆದರೆ ಉಡುಪಿಯಿಂದ ಕೆಲವೇ ಕೆಲವು ಕಿಮೀ ದೂರದಲ್ಲಿ ಮಲ್ಪೆ ಬೀಚ್ ಬಳಿ ಉದ್ದಿನ ಹಿತ್ಲು ಎಂಬಲ್ಲಿ ಕೃಷ್ಣನ ಸಹೋದರ ಬಲರಾಮನ ಮಂದಿರವಿದೆ ಈ ಮಂದಿರವೀಗ ಭಕ್ತಾಧಿಗಳ ಇಷ್ಟಾರ್ಷ ಸಿದ್ದಿ ದೇಗುಲವಾಗಿದೆ.ಇದಕ್ಕೊಂದು ಐತಿಹ್ಯವನ್ನೂ ಹೇಳುತ್ತಾರೆ. ಮಧ್ವಾಚಾರ್ಯರು ಒಮ್ಮೆ ಸಮುದ್ರ ತೀರದಲ್ಲಿ ಧ್ಯಾನ ಮಾಡುತ್ತಿದ್ದಾಗ ಸಮುದ್ರದಲ್ಲಿ ಒಂದು ದೊಡ್ಡ ಬಿರುಗಾಳಿ ಎದ್ದು ಸಮುದ್ರದಲ್ಲಿ ಚಲಿಸುತ್ತಿದ್ದ ಹಡಗು ಡೋಲಾಯಮಾನವಾಗಿ ಅದರಲ್ಲಿ ಇದ್ದವರು ಪ್ರಾಣರಕ್ಷಣೆಗಾಗಿ ಪರದಾಡುತ್ತಿದ್ದಾಗ, ಅಲ್ಲಿದ್ದ ಮಧ್ವರು ತಮ್ಮ ತಪೋಶಕ್ತಿಯಿಂದ ಬಿರುಗಾಳಿಯನ್ನು ನಿಯಂತ್ರಿಸಿ ಹಡಗಿನಲ್ಲಿರುವವರನ್ನು ಕಾಪಾಡುತ್ತಾರೆ.
ಆಗ ಹಡಗಿನಲ್ಲಿದ್ದವರು ನಮ್ಮ ಪ್ರಾಣಗಳನ್ನು ನೀವು ಕಾಪಾಡಿದ್ದೀರಿ ನಮ್ಮ ಹಡಗಿನಲ್ಲಿರುವ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳಿ ಎಂದು ಮಧ್ವಾಚಾರ್ಯರಿಗೆ ಹೇಳುತ್ತಾರೆ. ಆಗ ಮಾಧ್ವರು ನಿಮ್ಮ ಹಡಗಿನಲ್ಲಿರುವ ಗೋಪಿಚಂದನದ ದೊಡ್ಡ ಉಂಡೆಯನ್ನು ಕೊಡಿ ಎಂದು ಕೇಳುತ್ತಾರೆ, ಹಡಗಿನಲ್ಲಿರುವವರು ಸಂತೋಷದಿಂದ ಕೊಡುತ್ತಾರೆ.
ಮಧ್ವರು ಗೋಪಿಚಂದನದ ಉಂಡೆಯನ್ನು ಈಗಿನ ಉಡುಪಿಯ ಕೃಷ್ಣ ಮಠದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ತೊಳೆಯಲು ಪ್ರಾರಂಭಿಸುತ್ತಾರೆ. ಅದರಲ್ಲಿ ಸುಂದರವಾದ ಕೃಷ್ಣ ಹಾಗೂ ಬಲರಾಮನ ವಿಗ್ರಹಗಳು ಇರುತ್ತವೆ. ಈ ವಿಗ್ರಹಗಳು ಇರುವ ವಿಷಯ ಮೊದಲೇ ಮಧ್ವರಿಗೆ ಯೋಗ ದೃಷ್ಟಿಯಿಂದ ತಿಳಿದಿರುತ್ತದೆ.
ಮಧ್ವರು ಕೃಷ್ಣನನ್ನು ಪಶ್ಚಿಮಾಭಿಮುಖವಾಗಿ ಉಡುಪಿಯಲ್ಲಿ ಪ್ರತಿಷ್ಠಿಸುತ್ತಾರೆ. ಬಲರಾಮನ ವಿಗ್ರಹವನ್ನು ಮಲ್ಪೆಯ ಕಡಲ ತೀರದಲ್ಲಿ ಉದ್ದಿನ ಹಿತ್ಲು ಎಂಬಲ್ಲಿ ಪ್ರತಿಷ್ಠೆ ಮಾಡುತ್ತಾರೆ. ಕೆಲ ಹಿರಿಯರು ಹೇಳುವ ಪ್ರಕಾರ ಇಲ್ಲಿ ಮೊದಲು ಸುಬ್ರಹ್ಮಣ್ಯ ದೇವಸ್ಥಾನವಿತ್ತೆಂದೂ, ಅಲ್ಲಿನ ವಿಗ್ರಹ ಭಿನ್ನವಾದುದ್ದರಿಂದ ಆ ಜಾಗದಲ್ಲಿ ಬಲರಾಮನ ವಿಗ್ರಹವನ್ನು ಮಧ್ವರು ಪ್ರತಿಷ್ಠೆ ಮಾಡಿದರು ಎಂದು.
ಅದಕ್ಕೆ ಸಾಕ್ಷಿಯಾಗಿ ದೇಗುಲದ ಮುಂದಿನ ಧ್ವಜಸ್ತಂಭದ ಮೇಲೆ ಸುಬ್ರಹ್ಮಣ್ಯನ ವಾಹನವಾದ ನವಿಲಿನ ಚಿತ್ರವನ್ನು ನಾವು ಕಾಣಬಹುದು. ಹಾಗೂ ಈ ದೇಗುಲದ ಅಂಗಳದಲ್ಲಿ ಇರುವ ಕಲ್ಯಾಣಿಯನ್ನು ಸ್ಕಂದ ತೀರ್ಥವೆಂದೂ ಕರೆಯುತ್ತಾರೆ. ಭಗ್ನವಾಗಿರುವ ಸುಬ್ರಹ್ಮಣ್ಯನ ವಿಗ್ರಹವನ್ನು ಈ ಕಲ್ಯಾಣಿಯಲ್ಲಿ ಇಡಲಾಗಿದೆ ಎಂಬುದು ಪ್ರತೀತಿ.
ಈ ದೇಗುಲಕ್ಕೆ ಬರುವ ಭಕ್ತರು ಮೊದಲು ಸ್ಕಂದತೀರ್ಥದಲ್ಲಿ ಸ್ನಾನ ಮಾಡಿ ನಂತರ ಸಮೀಪದ ಸಮುದ್ರ ಸ್ನಾನ ಮಾಡಿ ತಮ್ಮ ಕೋರಿಕೆಯನ್ನು ಬಲರಾಮನಲ್ಲಿ ನಿವೇದಿಸಿದರೆ ತಪ್ಪದೆ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆ. ಇಲ್ಲಿ ತೊಗರಿಬೇಳೆ ಪಾಯಸ ಸೇವೆ, ಪಂಚಾಮೃತ ಸೇವೆ ವಿಶೇಷವಾದದ್ದು.
ನಮ್ಮ ಬಯಲು ಸೀಮೆಯವರಿಗೆ ಇದೊಂದು ವಿಶಾಲವಾದ ಹೆಂಚಿನ ಮನೆಯಂತೆ ತೋರುತ್ತದೆ. ಒಳಹೊಕ್ಕರೆ ಬಲರಾಮನ ದಿವ್ಯ ದರುಶನವಾಗುತ್ತದೆ. ಇಲ್ಲಿನ ಜನ ಈತನನ್ನು ವಡಭಾಂಡ ಬಲರಾಮ ಎಂದೂ ಈ ಕ್ಷೇತ್ರವನ್ನು ವಡಭಾಂಡೇಶ್ವರ ಎಂದೂ ಕರೆಯುತ್ತಾರೆ. ನಮ್ಮ ಮುಂದಿನ ಉಡುಪಿಯ ಭೇಟಿಯಲ್ಲಿ ಕೃಷ್ಣನ ದರುಶನದ ಜೊತೆಗೆ ಆತನ ಅಣ್ಣ ಬಲರಾಮನ ದರುಶನವನ್ನೂ ಮಾಡೋಣ.