ದಿ. ರಾಮಕೃಷ್ಣ ಹೆಗಡೆ ಜನ್ಮ ದಿನ: ಸಿಎಂ ಭಾವಪೂರ್ಣ ನಮನ

ಬೆಂಗಳೂರು: “ದಿ. ರಾಮಕೃಷ್ಣ ಹೆಗಡೆ ಅವರ ಜೀವನ ಮತ್ತು ಕೊಡುಗೆ ನಮಗೆ ಸದಾ ಆದರ್ಶಪ್ರಾಯ. ರಾಜ್ಯದ ಅಭಿವೃದ್ಧಿಗೆ ಅವರು ಹಾಕಿಕೊಟ್ಟ ಮಾರ್ಗವೇ ನಮ್ಮ ಸಂಕಲ್ಪವಾಗಿರುತ್ತದೆ”. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಸಲ್ಲಿಸಿರುವ ಭಾವಪೂರ್ಣ ನಮನಗಳು.

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ದಿವಂಗತ ರಾಮಕೃಷ್ಣ ಹೆಗಡೆ ಇಂದು ಅವರ 95ನೇ ಜನ್ಮದಿನ. “ಕರ್ನಾಟಕದಲ್ಲಿ ದೀರ್ಘಕಾಲದ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿ ಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳಾದ ದಿವಂಗತ ರಾಮಕೃಷ್ಣ ಹೆಗಡೆಯವರು  ರಾಜ್ಯದಲ್ಲಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದರು. ಕೇಂದ್ರದಲ್ಲಿ ವಿ ಪಿ ಸಿಂಗ್ ನೇತ್ರತ್ವದ ಸರ್ಕಾರ ರಚನೆಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

“ಹೆಗಡೆಯವರ ಜೊತೆ ನನ್ನ ತಂದೆ ಎಸ್. ಆರ್. ಬೊಮ್ಮಾಯಿ ಅವರ ಸ್ನೇಹ ಸಂಬಂಧ ಅವರ ಜೀವನದ ಅಂತ್ಯದವರೆಗೂ ಇತ್ತು. ಹೆಗಡೆಯವರ ಸಂಪುಟದಲ್ಲಿ ಸಚಿವರಾಗಿ, ಜನತಾದಳವನ್ನು ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಹೆಗಡೆಯವರು ಮತ್ತು ಬೊಮ್ಮಾಯಿಯವರು ಅವಿಶ್ರಾಂತವಾಗಿ ಶ್ರಮಿಸಿದ್ದರು.”

“ಹೆಗಡೆಯವರು ರಾಜ್ಯ ಕಂಡ ಮುತ್ಸದ್ದಿ ನಾಯಕರು. ಮೌಲ್ಯಾಧಾರಿತ ರಾಜಕೀಯದ ಪ್ರವರ್ತಕರು. ದಕ್ಷ ಆಡಳಿತಕ್ಕೆ, ಪ್ರಾಮಾಣಿಕತೆಗೆ ಅವರು ಮಾದರಿ. ಹೆಗಡೆಯವರ ಕೊಡುಗೆ ರಾಜ್ಯಕ್ಕೆ ಅಪಾರ. ಮುಖ್ಯವಾಗಿ ಆಡಳಿತ ವಿಕೇಂದ್ರೀಕರಣಕ್ಕೆ ಅವರು ಮಾಡಿದ ಪಂಚಾಯತ್ ರಾಜ್ ವ್ಯವಸ್ಥೆ ದೇಶದಲ್ಲಿ ಅನುಕರಣೀಯವೆಂದು ಪ್ರಶಂಸೆಗೆ ಪಾತ್ರವಾಗಿದೆ. ನನ್ನ ತಂದೆಯವರೊಂದಿಗೆ ಹೆಗಡೆಯವರ ಸಂಬಂಧ ಅವಿಸ್ಮರಣೀಯ. ಅತ್ಯಂತ ಧನ್ಯತೆಯಿಂದ ಸ್ಮರಿಸಿಕೊಳ್ಳುತ್ತೇನೆ.” ಎಂದು ಮುಖ್ಯಮಂತ್ರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

More News

You cannot copy content of this page