ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಮ್ಮ ಮೆಟ್ರೋ ರೈಲು ಸಂಚಾರ ಆರಂಭ

ಬೆಂಗಳೂರು : ಮೈಸೂರು ರಸ್ತೆಯಿಂದ ಕೆಂಗೇರಿ ಮೆಟ್ರೋ ನಿಲ್ದಾದಣದವರೆಗೆ 7.5  ಕಿ.ಮೀ ಉದ್ದದ ಮೆಟ್ರೋ ನೇರಳೆ ಮಾರ್ಗಕ್ಕೆ ಇಂದು ಚಾಲನೆ ನೀಡಲಾಯಿತು. ಕೇಂದ್ರ ವಸತಿ, ನಗರ ವ್ಯವಹಾರ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಿಸಿ, ರೈಲು ಸಂಚಾರಕ್ಕೆ  ಚಾಲನೆ ನೀಡಿದರು.

 ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರನ್ನು ನಿಜವಾದ ಅಂತರರಾಷ್ಟ್ರೀಯ ಕೇಂದ್ರವನ್ನಾಗಿಸಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಮೆಟ್ರೋ ಒಟ್ಟು 317 ಕಿ.ಮೀ ಉದ್ದದ  ಮಾರ್ಗ ನಿರ್ಮಾಣ ಗುರಿ ಸರ್ಕಾರ ಹೊಂದಿದೆ ಎಂದು ವಿವರಿಸಿದರು.

ಜನಸಂದಣಿ ಹೆಚ್ಚಿರುವ ಕಡೆ ಮೆಟ್ರೋ ಸೌಲಭ್ಯ ಕಲ್ಪಿಸಲಾಗಿದೆ. ದೂರದ ಪ್ರದೇಶಗಳಿಗೆ ಅತ್ಯಲ್ಪ ಸಮಯದಲ್ಲಿ ತಲುಪಲು ಮೆಟ್ರೋದಿಂದ ಸಾಧ್ಯ. ಈ 7.5 ಕಿ.ಮೀ ಮಾರ್ಗದಲ್ಲಿ ಅತ್ಯಂತ ಹೆಚ್ಚು ಜನಸಂದಣಿ ಇದೆ.‌ ಹೀಗಾಗಿ ಈ ಭಾಗದ ಬಹಳಷ್ಟು ಜನರಿಗೆ ಮೆಟ್ರೋ ರೈಲು ಉಪಯುಕ್ತವಾಗಲಿದೆ ಎಂದು ತಿಳಿಸಿದರು.

 ಬೆಂಗಳೂರು ವಿಮಾನ ನಿಲ್ದಾಣ ವಿಶ್ವದಲ್ಲಿಯೇ ವಿಶಿಷ್ಟ ವಿಮಾನ ನಿಲ್ದಾಣ. ಮುಂಬರುವ ದಿನಗಳಲ್ಲಿ, ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಒದಗಿಸಲಾಗುವುದು. ಮೂರು ವಿಧದ  ಸಂಪರ್ಕವನ್ನು ಒದಗಿಸಲಾಗುವುದು. ಈ ಕನಸನ್ನು ನನಸಾಗಿಸುವತ್ತ ಅಗತ್ಯವಿರುವ  ಎಲ್ಲಾ ತಯಾರಿಗಳನ್ನು ನಾವು ಮಾಡುತ್ತಿದ್ದೇವೆ ಎಂದರು.

ನಗರದಲ್ಲಿ  ದುಡಿಯುವ ವರ್ಗ ಬಹಳ ದೊಡ್ಡದಿದೆ.  ಅವರ ಅಭಿವೃದ್ಧಿಯನ್ನೂ ಗಮನದಲ್ಲಿರಿಸಿಕೊಂಡಿದ್ದೇವೆ. 75  ಕೊಳಗೇರಿಗಳ ಸಂಪೂರ್ಣ ಅಭಿವೃದ್ಧಿಯನ್ನು ಮಾಡುವುದಾಗಿ 75  ನೇ ಸ್ವಾತಂತ್ರ್ಯೋತ್ಸವ ದಿನದಂದು ಘೋಷಿಸಲಾಗಿದೆ. ಆರೋಗ್ಯ ಮೂಲಸೌಕರ್ಯ ವೃದ್ಧಿಗೆ ವಿಶೇಷ ಕಾರ್ಯಕ್ರಮ,  ಬೆಂಗಳೂರು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ 12  ಹೆಚ್ಚು ರಸ್ತೆಗಳನ್ನು ಗುರುತಿಸಿ ಅಡೆತಡೆ ಇಲ್ಲದೆ ವಾಹನ ಸಂಚಾರ, ಕೃತಕ ಬುದ್ದಿಮತ್ತೆ ಬಳಕೆಯಿಂದ  ಸಿಗ್ನಲ್ ವ್ಯವಸ್ಥೆಗೆ ಕ್ರಮ ಜರುಗಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ವಾಜಪೇಯಿ ಸ್ಮರಣೆ

ಬೆಂಗಳೂರು ಮೆಟ್ರೋ ಯೋಜನೆಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅನುಮೋದನೆ ನೀಡಿದ್ದರು. ಅವರ ಸಹಾಯವನ್ನು ನಾವು ಮರೆಯಬಾರದು ಎಂದು ಮುಖ್ಯಮಂತ್ರಿ ಅವರನ್ನು ಸ್ಮರಿಸಿದರು.

2024ಕ್ಕೆ ಮೆಟ್ರೋ ಕೆಲಸ ಪೂರ್ಣ

ಎರಡನೇ ಹಂತದ ಮೆಟ್ರೋ ಯೋಜನೆಯ ಕಾಮಗಾರಿ 2025 ಕ್ಕೆ ಮುಗಿಯಲಿದೆ. ಆದರೆ ಕೆಲಸದ ವೇಗವನ್ನು ಹೆಚ್ವಿಸಿ ಎಂದು ಸೂಚಿಸಿ ಎಂದು ಪ್ರಧಾನಿ ಅವರು ಇತ್ತೀಚೆಗೆ ನವದೆಹಲಿ ಭೇಟಿ ವೇಳೆ ತಿಳಿಸಿದ್ದರು. ಹೀಗಾಗಿ ಕಷ್ಟ ಪಟ್ಟು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ವಿ.ಮುನಿರತ್ನ, ಎಂ.ಟಿ.ಬಿ. ನಾಗರಾಜ್ ಕೆ.ಗೋಪಾಲಯ್ಯ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

More News

You cannot copy content of this page