ರಾಷ್ಟ್ರಧ್ವಜ ಉತ್ಪಾದನಾ ಸಿಬ್ಬಂದಿ ಸಮಸ್ಯೆ ಆಲಿಸಿದ ಡಿ.ಕೆ. ಶಿವಕುಮಾರ್

ಹುಬ್ಬಳ್ಳಿ : ಹುಬ್ಬಳ್ಳಿಯ ಬೆಂಗೇರಿಯಲ್ಲಿನ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರ ಧ್ವಜ ಉತ್ಪಾದನಾ ಕೇಂದ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ಭೇಟಿ ನೀಡಿ, ರಾಷ್ಟ್ರಧ್ವಜ ತಯಾರಿಕೆ ಪ್ರಕ್ರಿಯೆಯನ್ನು ವೀಕ್ಷಿಸಿದರು. ರಾಷ್ಟ್ರ ಧ್ವಜಕ್ಕೆ ಸ್ವತಃ ಇಸ್ತ್ರಿ ಮಾಡುವ ಮೂಲಕ ಆ ಪ್ರಕ್ರಿಯೆಯಲ್ಲಿ ಸಾಂಕೇತಿಕವಾಗಿ ಪಾಲ್ಗೊಂಡರು. ಜತೆಗೆ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.

ಕಳೆದ 63 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯು 900 ಮಂದಿಗೆ ಉದ್ಯೋಗ ಕಲ್ಪಿಸಿದೆ. 30 ಮಂದಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಉತ್ಪಾದನೆಯಾಗುತ್ತಿರುವ ರಾಷ್ಟ್ರಧ್ವಜ ದೇಶದ ಮೂಲೆ, ಮೂಲೆಗಳಿಗೂ ಪೂರೈಸಲಾಗುತ್ತಿದೆ. ಇಂಥ ಹೆಗ್ಗಳಿಕೆ ಹೊಂದಿರುವ ಸಂಸ್ಥೆಗೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು.

ಕೊರೋನಾ ಲಾಕ್ ಡೌನ್ ಪರಿಣಾಮವಾಗಿ ಸಂಸ್ಥೆಯ ಉತ್ಪಾದನೆ ಮತ್ತು ಮಾರಾಟ ಮಳಿಗೆಗಳ ಸಿಬ್ಬಂದಿ ಸಮರ್ಪಕ ಕೆಲಸವಿಲ್ಲದೆ ನಿತ್ಯ ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ. ಸಾಂಪ್ರದಾಯಿಕ ವೃತ್ತಿನಿರತರಿಗೆ ನೀಡಿರುವ ಪರಿಹಾರವನ್ನು ತಮಗೂ ಸಿಗುವಂತಾಗಲು ಸರಕಾರದ ಮೇಲೆ ಒತ್ತಡ ತರುವಂತೆ ಶಿವಕುಮಾರ್ ಅವರಲ್ಲಿ ನೌಕರರು ಮನವಿ ಮಾಡಿಕೊಂಡರು.

ಇದರ ಜತೆಗೆ, ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯು ಬಾಕಿ ಅನುದಾನ ಬಿಡುಗಡೆ ಮಾಡದೆ ಇರುವುದರಿಂದ ಸಾಕಷ್ಟು ಅನಾನುಕೂಲಗಳಾಗಿವೆ. ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರುವುದಾಗಿ ಶಿವಕುಮಾರ್ ಅವರು ಅವರಿಗೆ ಭರವಸೆ ನೀಡಿದರು.

ಡಿ.ಕೆ. ಶಿವಕುಮಾರ್ ಅವರು ಅಲ್ಲಿಂದ ತೆರಳುವ ಮುನ್ನ, ಭಾರತದ ಉನ್ನತ ಪರಂಪರೆಯ ಭಾಗವಾಗಿರುವ ಈ ಸಂಸ್ಥೆಗೆ ಭೇಟಿ ನೀಡಿದ್ದು ತಮಗೆ ಹೆಮ್ಮೆ ತಂದಿದೆ. ಇಲ್ಲಿನ ಸಿಬ್ಬಂದಿಯ ದೇಶ ಸೇವೆ ಶ್ಲಾಘನಾರ್ಹ. ಅವರ ಸೇವೆಗೆ ನಮಿಸುತ್ತೇನೆ ಎಂದು ಸಂಸ್ಥೆಯ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಹಸ್ತಾಕ್ಷರದಲ್ಲಿ ದಾಖಲಿಸಿದರು.

ಮಾಜಿ ಸಚಿವ ವೀರಣ್ಣ ಮತ್ತಿಕಟ್ಟಿ, ಕುಲದೀಪ್ ರಾಯ್ ಶರ್ಮಾ, ಪ್ರಸಾದ ಅಬ್ಬಯ್ಯ, ನೇರಳಕೇರಿ, ಶರಣಪ್ಪ ಕೋಟಗಿ, ಸದಾನಂದ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

More News

You cannot copy content of this page