ಬೆಂಗಳೂರು : ಮೀಸಲಾತಿ 3ಬಿ ನಿಂದ 2ಎ ಗೆ ಬದಲಾವಣೆ ಮಾಡುವಂತೆ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕ್ಷತ್ರೀಯ ಮರಾಠ ಸಂಘದ ಪದಾಧಿಕಾರಿಗಳು ಏಕಾಏಕಿ ಘೋಷಣೆ ಕೂಗಿದ್ದರಿಂದ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಬಳಿ ಹೈಡ್ರಾಮಾ ನಡೆಯಿತು.
ಬೆಂಗಳೂರಿನಲ್ಲಿ ಇಂದು ಕ್ಷತ್ರೀಯ ಮರಾಠ ಸಂಘದ ಸದಸ್ಯರು ಸಭೆ ನಡೆದು ತಮ್ಮ ಹತ್ತು ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಮುಂದಾದರು. ಮುಖ್ಯಮಂತ್ರಿ ಅವರ ಗೃಹಕಚೇರಿ ಕೃಷ್ಣಾ ಬಳಿ ಸೇರಿದ್ದ ಸಂಘದ ನೂರಾರು ಸದಸ್ಯರು ಒಮ್ಮೆಲೆ ಘೋಷಣೆಗಳನ್ನು ಕೂಗಿ ಹೈಡ್ರಾಮ ಸೃಷ್ಠಿಸಲು ಮುಂದಾದರು.
ಮರಾಠ ಸಮುದಾಯವನ್ನು 3ಬಿ ಯಿಂದ 2ಎಗೆ ಸೇರ್ಪಡೆ ಮಾಡಬೇಕು, ಮರಾಠ ಅಭಿವೃದ್ಧಿ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕಮಾಡಬೇಕು, ಶಾಸಕ ಶ್ರೀಮಂತ್ ಪಾಟೀಲ್ ಗೆ ಸಚಿವ ಸ್ಥಾನ ನೀಡಬೇಕು ಸೇರಿದಂತೆ ಹತ್ತು ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಘೋಷಣೆಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಇವರು ಪ್ರತಿಭಟನೆ ನಡೆಸಿದ್ದರಿಂದ ಕೃಷ್ಣಾದ ಸುತ್ತಮುತ್ತಾ ಕೆಲಕಾಲ ಸಂಚಾರದಲ್ಲಿ ವೆತ್ಯೆಯ ಉಂಟಾಗಿತ್ತು.
ನಂತರ, ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಮುಖಂಡರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಭೆ ನಡೆಸಿದರು. ಸಭೆಯಲ್ಲಿ ಮರಾಠ ಸಮಾಜದ ಮುಖಂಡರಾದ ಪಿ ಜಿ ಆರ್ ಸಿಂಧ್ಯಾ, ಬೆಂಗಳೂರಿನ ಗೋ ಸಾಯಿ ಮಹಾಸಂಸ್ಥಾನಮಠದ ಮಂಜುನಾಥ ಸ್ವಾಮೀಜಿ ಸೇರಿದಂತೆ ಇತರರು ಭಾಗವಹಿಸಿದ್ದರು. ಸಭೆಯಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.