ಬೆಂಗಳೂರು : ಪ್ರತಿಯೊಬ್ಬ ಮಕ್ಕಳಿಗೂ ಲಸಿಕೆ ಸಿಗಬೇಕು ಎನ್ನುವುದು ನಮ್ಮ ಅಭಿಪ್ರಾಯ, ಆದರೆ ಇದಕ್ಕೆ ಇನ್ನೂ ಪರವಾನಗಿ ಸಿಗಬೇಕಿದೆ, ಅನುಮತಿ ಸಿಕ್ಕರೆ ಮಕ್ಕಳಿಗೂ ಲಸಿಕೆ ನೀಡುವ ಕಾರ್ಯ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.ಬೆಂಗಳೂರಿನಲ್ಲಿ ಇಂದು ಕೊವೀಡ್ ತಾಂತ್ರಿಕ ಸಲಹಾ ಸಮಿತಿ, ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ನೇತೃತ್ವದ ಸಭೆ ನಡೆಯಿತು. ಕೆಲವು ತಾಂತ್ರಿಕ ಸಮಸ್ಯೆಗಳನ್ನೂ ಚರ್ಚಿಸಲಾಯಿತು. ಮೊದಲ ಡೋಸ್ ಪಡೆಯುವಾಗ ಒಂದು ನಂಬರ್, ೨ನೇ ಡೋಸ್ ವೇಳೆ ಮತ್ತೊಂದು ನಂಬರ್ ನೀಡ್ತಾರೆ, ಜನರ ಈ ನಡೆ ಸಮಸ್ಯೆಯನ್ನ ತಂದಿದೆ ಎಂದು ವಿವರಿಸಿದರು,
ಮೂರನೇ ಅಲೆ ಕೆಲವು ರಾಜ್ಯಗಳಲ್ಲಿ ಪ್ರಾರಂಭವಾಗಿದೆ, ನಮ್ಮ ರಾಜ್ಯದಲ್ಲಿ ಮೂರನೇ ಅಲೆ ಭಾದಿಸಬಾರದು ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಸುಧಾಕರ್ ತಿಳಿಸಿದರು.
ಆಗಸ್ಟ್ ತಿಂಗಳಲ್ಲಿ ಒಂದು ಕೋಟಿ ಹತ್ತು ಲಕ್ಷ ಲಸಿಕೆ ನೀಡಿದ್ದೇವೆ, ಇದನ್ನು ದ್ವಿಗುಣ ಮಾಡುವ ಗುರಿಯಿದೆ, ಲಸಿಕಾ ಉತ್ಸವ ಅಂತ ಕಾರ್ಯಕ್ರಮ ನಡೆಸಿ, ಕೊಳಚೆ ನಿವಾಸಿಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಕೆಲ ಜಿಲ್ಲೆಗಳಲ್ಲಿ ಲಸಿಕೆ ತೆಗೆದುಕೊಳ್ಳುಲು ಹಿಂಜರಿಕೆ ಇದೆ, ಇದನ್ನು ಸರಿಪಡಿಸಬೇಕಿದೆ, ಇದಕ್ಕಾಗಿ ಶೀಘ್ರದಲ್ಲೇ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದ ಅವರು, ಕೇರಳದ ಗಡಿ ಜಿಲ್ಲೆಗಳಲ್ಲಿ ಲಸಿಕೆ ಹೆಚ್ಚು ನೀಡುಲ ಕೆಲಸವಾಗಬೇಕಾಗಿದೆ ಎಂದು ವಿವರಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಗಟ್ಟಿ ನಿಲುವು ತಾಳಬೇಕಾಗಿದೆ. ೯ ರ ನಂತರದ ಶಿಕ್ಷಣಕ್ಕೆ ಅವಕಾಶ ಕೊಟ್ಟಿದ್ದೇವೆ, ೬ ರಿಂದ ೮ ರವರೆಗೆ ತರಗತಿ ಆರಂಭವಾಗಬೇಕು, ಇಂದು ಸಭೆಯಲ್ಲಿ ಇದರ ಚರ್ಚೆಯಾಗಿದೆ, ಸಂಜೆ ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧರಿಸುತ್ತೇವೆ, ಪೋಷಕರಿಂದಲೂ ಶಾಲೆ ಪ್ರಾರಂಭಕ್ಕೆ ಒತ್ತಡವಿದೆ ಎಂದು ತಿಳಿಸಿದರು.