ಬೆಳಗಾವಿ : ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನದ ಮೂಲಕ ಗ್ರಾಮೀಣ ಜನಸಮುದಾಯವನ್ನು ಕೊವಿಡ್ ಮುಕ್ತ ಸಮುದಾಯವನ್ನಾಗಿ ಮಾಡಲು ಗ್ರಾಮ ಪಂಚಾಯತಿಗಳು ಸಕ್ರಿಯವಾಗಿ ಶ್ರಮಿಸಲಿವೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಯಾಗುತ್ತಿರುವ ವಿನೂತನ ಕಾರ್ಯಕ್ರಮವಿದು ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪ೦ಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ ಎಸ್ ಈಶ್ವರಪ್ಪ ಅವರು ಅಭಿಪ್ರಾಯಪಟ್ಟರು. ಬೆಳಗಾವಿಯ ಸುವರ್ಣ ಸೌಧದಲ್ಲಿ “ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ” ಕ್ಕೆ ಇಂದು ಚಾಲನೆ ನೀಡಿ ಅವರು ಮಾತನಾಡಿದರು. ಅಭಿಯಾನವು ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಗದಗ , ಚಾಮರಾಜನಗರ ದಾವಣಗೆರೆ, ಕಲ್ಬುರ್ಗಿ, ಕೊಪ್ಪಳ , ಮಂಡ್ಯ, ಮೈಸೂರು, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಗ್ರಾಮ ಪ೦ಚಾಯತ್ ಆರೋಗ್ಯ ಅಮೃತ ಅಭಿಯಾನ, ಕೊವಿಡ್ ಸೋಂಕು ತಡೆ ಮತ್ತು ನಿರ್ವಹಣೆ ಲಸಿಕಾ ಆಂದೋಲನ, ಕ್ಷಯರೋಗ ನಿರ್ಮೂಲನೆ ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ನಿರ್ವಹಣೆ , ಬಾಲ್ಯ ವಿವಾಹ ವಿರೋಧೀ ಆಂದೋಲನಗಳoತ ಪ್ರಮುಖ ಕಾರ್ಯಕ್ರಮಗಳನ್ನು ನಡೆಸಲಿದೆ.
ಪಂಚಾಯತ್ ಕಾರ್ಯಪಡೆಯ ಸದಸ್ಯರಿಗೆ ತರಬೇತಿ, ಆರೋಗ್ಯ ತಪಾಸಣೆಯ 8 ಮಹತ್ವದ ಉಪಕರಣಗಳನ್ನು ಒಳಗೊಂಡ ಪಂಚಾಯತ್ ಕಿಟ್, ಕೊವಿಡ್ ಸೋಂಕು ಖಾತ್ರಿಯಾದವರ ಪ್ರತ್ಯೇಕ ವಾಸದ ಆರೈಕೆಗಾಗಿ ಕೊವಿಡ್ ಕಿಟ್ , ಸೋಂಕಿತರ , ಸೋoಕಿನಿಂದ ನೊಂದವರ, ಸಾವಿಗೀಡಾದವರ ಕುಟುಂಬದ ಆಪ್ತ ಸಮಾಲೋಚನೆಯೂ ಸೇರಿದಂತೆ “ ಸಹಿತ “ ಸಹಾಯವಾಣಿಯಲ್ಲಿ ಸಾಂತ್ವನ ಸೇವೆ ದೊರೆಯಲಿದೆ.
ಆರೋಗ್ಯ ಇಲಾಖೆಯ ಉಪಕೇಂದ್ರ ಗಳು ಮತ್ತು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಆರೋಗ್ಯ ಕಾರ್ಯಪಡೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿವೆ. ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಹೆಸರೇ ಹೇಳುವಂತೆ ಮುಂಬರುವ ಕಾಲಮಾನದಲ್ಲಿ ಗ್ರಾಮ ಸಮಾಜಕ್ಕೆ ಪಂಚಾಯತ್ ಗಳು ಆರೋಗ್ಯದ ಅಮೃತವನ್ನು ನೀಡುತ್ತವೆ ಎಂಬ ಆಶಯದೊoದಿಗೆ ಹೊಸ ದಿಗಂತದತ್ತ ಹೆಜ್ಜೆ ಇಡುತ್ತಿದೆ ಎಂದು ತಿಳಿಸಿದರು.