ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಿರುಸಿನ ಪ್ರಚಾರ ಕಾರ್ಯ ಕೈಗೊಂಡರು. ನಗರದ ಸೂಪರ್ ಮಾರ್ಕ್ಟ್ ಸಿಟಿಯಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚುನಾವಣಾ ಪ್ರಚಾರ ನಡೆಸಿದರು.
ನಂತರ ಮಾತನಾಡಿದ ಅವರು, ಜಾತ್ಯತೀತ ಜನತಾದಳದ 47 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಪ್ರಾಂತೀಯ ಪಕ್ಷ ಸ್ಪರ್ಧೆ ನಡೆಸುತ್ತಿದೆ. ಇವರನ್ನು ಗೆಲ್ಲಿಸುವ ಮೂಲಕ ಈ ಭಾಗದಲ್ಲಿ ಮತ್ತೆ ಜೆಡಿಎಸ್ ತಮ್ಮ ಪತಾಕೆ ಹಾರಿಸಲಿ ಎಂದು ಕರೆನೀಡಿದರು.
ಕಲುಬುರಗಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಯುಜಿಡಿ ಸಮಸ್ಯೆಯನ್ನು ಇದುವರೆಗೂ ಅಧಿಕಾರ ನಡೆಸಿದ ಪಕ್ಷದ ಅಭ್ಯರ್ಥಿಗಳು ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕೆಂದು ತಿಳಿಸಿದರು.
ಅತಿವೃಷ್ಠಿ, ಅನಾವೃಷ್ಠಿಗೆ ಈ ಸರ್ಕಾರ ಸ್ಪಂದಿಸುತ್ತಿಲ್ಲ, ಯೋಜನೆಗಳ ಹೆಸರಿನಲ್ಲಿ ಭೃಷ್ಟಾಚಾರ ನಡೆಯುತ್ತಿದೆ, ಇವುಗಳನ್ನು ತಡೆಯಲು ಜೆಡಿಎಸ್ ನಾಯಕರು ಪ್ರಯತ್ನ ನಡೆಸಬೇಕು. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಯೇ, ಅವರ ನಡವಳಿಕೆ ಹೇಗಿದೆ ಅನ್ನೋದನ್ನ ತೋರಿಸುತ್ತದೆ.