ಮಾಗಡಿ: ರಾಜ್ಯದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL) ನೆರವಿನೊಂದಿಗೆ ಈ ಆಸ್ಪತ್ರೆಯಲ್ಲಿ ಆಕ್ಸಿಜನ್ ಜನರೇಟರ್ ಅಳವಡಿಸಲಾಗಿದ್ದು,ಇಲ್ಲಿ ಪ್ರತಿ ನಿಮಿಷಕ್ಕೆ 580 ಲೀಟರ್ ಆಮ್ಲಜನಕ ಉತ್ಪಾದನೆ ಆಗುತ್ತದೆ.ಇನ್ನು ಮುಂದೆ ಈ ಆಸ್ಪತ್ರೆಗೆ ಆಮ್ಲಜನಕದ ಕೊರತೆ ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು.
ಇಂದು ಮಾಗಡಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರಲ್ಲದೆ,ಈಗಾಗಲೇ ಆಗಿರುವ ಕೆಲಸಗಳನ್ನೂ ಪರಿಶೀಲನೆ ನಡೆಸಿದರು.ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಲಾಗಿರುನ ನೂತನ ಆಮ್ಲಜನಕ ಉತ್ಪಾದನಾ ಘಟಕ ಲೋಕಾರ್ಪಣೆ ಮಾಡಿದ ಅವರು,ಆಸ್ಪತ್ರೆಯ ಲ್ಲಿ ಹೊಸದಾಗಿ ಅಳವಡಿಸಲಾಗಿರುವ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದರು.
ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,6,000 ಲೀಟರ್ ಆಮ್ಲಜನಕ ಸಂಗ್ರಹಗಾರವನ್ನು ಆಸ್ಪತ್ರೆಯಲ್ಲಿ ನಿರ್ಮಿಸ ಲಾಗುವುದು.25 ಐಸಿಯು-ಆಕ್ಸಿಜನ್ ಬೆಡ್ʼಗಳ ವ್ಯವಸ್ಥೆ ಮಾಡಲಾಗುತ್ತಿದ್ದು,ಈ ಪೈಕಿ 6 ಹಾಸಿಗೆಗಳನ್ನು ಮಕ್ಕಳಿಗೇ ಮೀಸಲಿ ಡಲಾಗುತ್ತಿದೆ.ವೈದ್ಯರು,ಅರೆ ವೈದ್ಯ ಸಿಬ್ಬಂದಿ,ತಂತ್ರಜ್ಞರು, ನರ್ಸುಗಳು ಸೇರಿ ಅಗತ್ಯ ಸಿಬ್ಬಂದಿಯನ್ನು ಕೂಡಲೇ ಒದಗಿಸಲಾಗುವುದು ಎಂದು ತಿಳಿಸಿದರು.
6 ಕಡೆ ಆಮ್ಲಜನಕ ಘಟಕ : ಮಾಗಡಿ ಸೇರಿ ಜಿಲ್ಲೆಯ 6 ಕಡೆ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.ರಾಮ ನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 1,000 ಲೀಟರ್ ಉತ್ಪಾದನೆ ಮಾಡ ಬಲ್ಲ ಘಟಕ,ಬಿಡದಿಯಲ್ಲಿ ಟೊಯೋಟಾ ಕಂಪನಿ ನೆರವಿನಿಂದ ಆಮ್ಲಜನಕ ಉತ್ಪಾದನಾ ಘಟಕ ಹಾಗೂ ಬಾಟ್ಲಿಂಗ್ ಘಟಕವನ್ನೂ ಸ್ಥಾಪಿಸಲಾಗುತ್ತಿದೆ.ಕನಕಪುರ,ಚನ್ನಪಟ್ಟಣ ಹಾಗೂ ಜಿಲ್ಲಾ ಕೇಂದ್ರದಲ್ಲಿರುವ ಹಳೆಯ ಜಿಲ್ಲಾಸ್ಪತ್ರೆಯಲ್ಲೂ ಆಮ್ಲಜನಕ ಉತ್ಪಾದನಾ ಘಟಕ ಹಾಕಲಾಗುವುದು.ಈ ಹಳೆಯ ಆಸ್ಪತ್ರೆಯ ನ್ನು ತಾಯಿ ಮಕ್ಕಳ ಆಸ್ಪತ್ರೆಯನ್ನಾಗಿ ಈಗಾಗಲೇ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜಿಲ್ಲಾ ಕೇಂದ್ರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಭಾರೀ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 100 ಐಸಿಯು ಬೆಡ್ʼಗಳ ವ್ಯವಸ್ಥೆ ಮಾಡಲಾಗುತ್ತಿದ್ದು,ಎಲ್ಲ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಸೌಲಭ್ಯಗಳನ್ನು ಹೆಚ್ಚಿಸುವ ಕೆಲಸ ಈಗ ಸಾಗುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಸಚಿವರ ಸಂಚಾರ : ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ರಾಕೇಶ ಕುಮಾರ್ ಮತ್ತಿತರೆ ಅಧಿಕಾರಿಗಳು ಮತ್ತು ಮುಂಖಂಡರು, ಅಧಿಕಾರಿಗಳ ಜತೆ ತಾಲೂಕಿನಾದ್ಯಂತ ರೌಂಡ್ಸ್ ಹೊಡೆದ ಸಚಿವರು, ಮಾಗಡಿ ಆಸ್ಪತ್ರೆಯ ಮುಂದೆಯೇ ನಿರ್ಮಾಣ ಆಗುತ್ತಿರುವ ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಹೆಸರಿನ ಆಡಿಟೋರಿಯಂ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದರು. 4 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕೃಷಿ ಯಂತ್ರೋಪಕರಣ ಕೇಂದ್ರಕ್ಕೆ ಭೇಟಿ: ತಾಲೂಕಿನ ಕರಲಮಂಗಲಕ್ಕೆ ಭೇಟಿ ನೀಡಿದ ಸಚಿವರು, ಅಲ್ಲಿ ಸಂಜೀವಿನಿ ಒಕ್ಕೂಟದ ಮಹಿಳಾ ಸ್ವ-ಸಹಾಯ ಗುಂಪುಗಳ ಮಹಿಳೆಯರೇ ನಿರ್ವಹಣೆ ಮಾಡುತ್ತಿರುವ ʼಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣ ಕೇಂದ್ರʼವನ್ನು ವೀಕ್ಷಣೆ ಮಾಡಿದರು.ಮಹಿಳೆಯರು ಈ ಯಂತ್ರಗಳ ಮೂಲಕ ಮಾಸಿಕ 60,000 ರೂ.ದುಡಿಯುತ್ತಿದ್ದು, ಸಚಿವರು ಮಹಿಳೆಯರ ಜತೆ ಸಂವಾದ ನಡೆಸಿದರು.
ಇಲ್ಲಿ 45 ಸ್ವ-ಸಹಾಯ ಗುಂಪುಗಳಿದ್ದು,700 ಸದಸ್ಯೆಯರು ಇದ್ದಾರೆ.ಇವರು ಯಂತ್ರೋಪಕರಣ ಕೇಂದ್ರವನ್ನು ಹೇಗೆ ನಿರ್ವಹಿಸು ತ್ತಾರೆ? ಬಾಡಿಗೆ ಪಡೆದವರು ಹಣ ಕೊಡುತ್ತಿದ್ದಾರೆಯೇ ಇತ್ಯಾದಿ ಪ್ರಶ್ನೆಗಳನ್ನು ಸಚಿವರು ಮಹಿಳೆಯರಿಗೆ ಕೇಳಿದರು.