ಬೆಂಗಳೂರು : ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ, ಪೆಟ್ರೋಲ್, ಡಿಸೇಲ್ ಬೆಲೆ ಏರುತ್ತಲೇ ಇದೆ, ಅಡಿಗೆ ಅನಿಲದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಬೆಲೆ ಏರಿಕೆಯಿಂದ ಜನರ ಜೀವನ ದುಸ್ಥರವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಜಸ್ತಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಾಯ್ದೆಗಳ ಬಗ್ಗೆ ವಾಗ್ದಾಳಿ ನಡೆಸಿದರು. ಸ್ಚಚ್ಚ ಭಾರತ್, ಮೇಕ್ ಇನ್ ಇಂಡಿಯಾ, ಗಂಗಾ ಕ್ಲೀನ್ ಯೋಜನೆ ಎಲ್ಲಿಗೆ ಹೋಗಿವೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಉದ್ಯೋಗ ಭದ್ರತೆ ಇಲ್ಲದಂತಾಗಿದೆ, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ, ಇವತ್ತು ದೇಶದಲ್ಲಿ ಎಲ್ಲವೂ ಕುಸಿದು ಹೋಗಿದೆ ಎಂದರು. ಕೇಂದ್ರದ ಯೋಜನೆಗಳು ಜನಪರವಾಗಿಲ್ಲ, ಲಸಿಕೆ ವಿತರಣೆಯಲ್ಲೂ ಅವ್ಯವಹಾರವಾಗ್ತಿದೆ, ರಾಜ್ಯ ಹಾಗೂ ಕೇಂದ್ರದ ನಡುವೆ ಸಾಮರಸ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ದೇಶದ ಅಭಿವೃದ್ಧಿ ೫೦ ವರ್ಷಗಳ ಹಿಂದಕ್ಕೆ ಸರಿದಿದೆ. ಸಂಸತ್ ನಲ್ಲಿ ಉತ್ತರ ಕೊಡಲು ಸರ್ಕಾರಕ್ಕೆ ಆಗ್ತಿಲ್ಲ, ಈ ಬಾರಿಯೂ ಚರ್ಚೆಗೆ ಅವಕಾಶವಿಲ್ಲದೆ ಕಲಾಪ ಹಾಳಾಯ್ತು, ಜನರ ಸಮಸ್ಯೆಗಳ ಚರ್ಚೆಗೆ ಅವಕಾಶವೇ ಇಲ್ಲದಂತಾಗಿದೆ ಎಂದು ಸಚಿನ್ ಪೈಲಟ್ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕವಲಯವನ್ನ ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿದೆ, ಹಿಂದೆ ನಮ್ಮ ಸರ್ಕಾರದಲ್ಲಿ ಹೀಗಿರಲಿಲ್ಲ, ಆರ್ಥಿಕ ವ್ಯವಸ್ಥೆಗೆ ಹಾಗೂ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು ಎಂದು ತಿಳಿಸಿದರು. ರೈಲ್ವೆ, ವಿಮಾನನಿಲ್ದಾಣ, ಗ್ಯಾಸ್ ಲೈನ್ ಎಲ್ಲವೂ ಪಬ್ಲಿಕ್ ಸೆಕ್ಟರ್ ನಲ್ಲಿತ್ತು, ಆದರೆ ಈಗ ಎಲ್ಲವೂ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನಸಾವನ್ನಪ್ಪಿದ್ದು, ಆದ್ರೆ, ಯಾರು ಸತ್ತಿಲ್ಲವೆಂದು ಸಂಸತ್ ನಲ್ಲಿ ಉತ್ತರ ಕೊಡ್ತಾರೆ, ಸತ್ತವರಿಗೆ ೨ ಲಕ್ಷ ಪರಿಹಾರ ಸರ್ಕಾರ ನೀಡಿದೆ, ನಾವು ತಲಾ ಒಂದೊಂದು ಲಕ್ಷ ನೀಡಿದ್ದೇವೆ ಇಂದು ಕೇಂದ್ರ ಸರ್ಕಾರ ನಡೆಸುತ್ತಿರುವ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದರು.
ನೋ ವ್ಯಾಕ್ಸಿನೇಶನ್, ನೋ ರೇಷನ್, ನೋ ಪೆನ್ಶನ್ ಅನ್ನುತ್ತಿರುವ ಚಾಮರಾಜನಗರ ಡಿಸಿಯನ್ನ ಮೊದಲು ಸಸ್ಪೆಂಡ್ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಡಿಕೆಶಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು.