ಬೆಂಗಳೂರು : ನಾಯಂಡಹಳ್ಳಿ-ಕೆಂಗೇರಿ ನಡುವಿನ ಮೆಟ್ರೋ ಮಾರ್ಗ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ನಿರ್ಲಕ್ಷ್ಯ ಮಾಡಿರುವ ಕ್ರಮವನ್ನು ಸಚಿವ ಸುನಿಲ್ ಕುಮಾರ್ ಖಂಡಿಸಿದ್ದಾರೆ.ಈ ಸಂಬಂಧ ಕಾರ್ಯಕ್ರಮದಲ್ಲಿ ಭಾಷೆ ಬಳಕೆ ಮಾಡದಿರುವ ಕುರಿತು ಸ್ಪಷ್ಟನೆ ನೀಡುವಂತೆ ಹಾಗೂ ನಿರ್ಲಕ್ಷ್ಯಿಸಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ನಿರ್ದೇಶನ ನೀಡಿ ಪತ್ರ ಬರೆದಿದ್ದಾರೆ.
ಕಾರ್ಯಕ್ರಮದ ಮುಖ್ಯ ದ್ವಾರದಲ್ಲಿ,ವೇದಿಕೆ ಕಾರ್ಯಕ್ರಮದ ಹಿಂಬದಿಯಲ್ಲಿ ಸೇರಿದಂತೆ ಎಲ್ಲೂ ಕನ್ನಡ ಬಳಸಿರುವುದು ಕಂಡು ಬಂದಿಲ್ಲ.ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದೂ ಬಿಎಂಆರ್ ಸಿಎಲ್ ಈ ನಿರ್ಲಕ್ಷ್ಯ ಅಕ್ಷ್ಯಮ್ಮವಾಗಿದೆ.ಇಂತಹ ಲೋಪಗಳು ಪದೇ ಪದೇ ಮರುಕಳಿಹಿಸಿದರೂ ತಪ್ಪೆಸಗುತ್ತಿರು ವುದು ಜನರ ಭಾವನೆಗಳನ್ನು ಕೆರಳಿದೆ.ಆಡಳಿತ ಭಾಷೆಯನ್ನು ಕಡೆಗಣಿಸುವುದು ಕರ್ತವ್ಯ ಲೋಪವಾಗಲಿದೆ.
ಆದ್ದರಿಂದ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸೂಕ್ತ ವಿವರಣೆ ನೀಡುವಂತೆ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಸೂಚಿಸಿದ್ದಾರೆ.
ಆಗಸ್ಟ್ 29 ರಂದು ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗವನ್ನು ಕೇಂದ್ರದ ಸಚಿವ ಹರ್ದೀಪ್ ಸಿಂಗ್ ಪುರಿ ಉದ್ಘಾಟನೆ ನೆರವೇರಿಸಿದ್ದರು.ಈ ವೇಳೆ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ವೇದಿಕೆ ಸೇರಿದಂತೆ ಎಲ್ಲೂ ಕನ್ನಡ ಬಳಕೆ ಮಾಡಿರಲಿಲ್ಲ ಈ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತವಾಗಿತ್ತು.