ಮೈಸೂರು : ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನ ಸಮಾನಾಗಿ ನೋಡಬೇಕು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮೇಕೆದಾಟು ಯೋಜನೆಗೆ ಅನುಮೋದನೆ ಪಡೆದುಕೊಳ್ಳಲು ಬಿಜೆಪಿ ಸಂಸದರಿಗೆ ಶಕ್ತಿಯಿಲ್ಲ. ಕರ್ನಾಟಕ ಸಂಸದರಿಗೆ ಮೂಳೆ,ಎಲುಬು ಎರಡೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಟ್‌ಕೇಸ್ ತಗೊಂಡು ಹೋದರೆ ಸಾಲದು.ರಾಜ್ಯದ ಜಟಿಲ ಸಮಸ್ಯೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ತಿಳಿ ಹೇಳಿದರು.
ನಿನ್ನೆ ನವದೆಹಲಿಯಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ 30 ಟಿಎಂಸಿ ನೀರು ಬಿಡುಗಡೆಗೆ ಆದೇಶ ಮಾಡಿದೆ.ಇದಕ್ಕಾಗಿಯೇ ನಾವು ಮೇಕೆದಾಟು ಸಮಾನಾಂತರ ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾಗಿದ್ದೇವೆ.ಈ ಭಾರಿ ಸರಿಯಾಗಿ ಮಳೆಯಾಗಿಲ್ಲ.ಉತ್ತಮವಾಗಿ ಮಳೆಯಾಗಿದ್ದರೆ ಅದು ತಮಿಳುನಾಡಿಗೆ ನೇರವಾಗಿ ಹರಿದು ಹೋಗುತ್ತಿತ್ತು.ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡಿದರೆ ತಮಿಳು ನಾಡಿಗೆ ಅಗತ್ಯ ಬಿದ್ದಾಗ ನೀರು ಬಿಡುಗಡೆಗೆ ಅವಕಾಶವಾಗುತ್ತಿತ್ತು.ಇದನ್ನು ಮಾಡುವ ಶಕ್ತಿ ರಾಜ್ಯ ಸರ್ಕಾರಕ್ಕೆ ಅಥವಾ ಬಿಜೆಪಿ ಸಂಸದರಿಗಿಲ್ಲವೆಂದು ಅವರು ಅಸಾಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ನಿರ್ಲಕ್ಷ್ಯದ ಹಿನ್ನಲೆಯಲ್ಲಿಯೇ ನಾವು ಮೇಕೆದಾಟು ಯೋಜನೆ ಆರಂಭಿಸಬೇಕು ಎನ್ನುತ್ತಿರೋದು.ಸಮುದ್ರಕ್ಕೆ ಹರಿದುಹೋಗುವ ಹೆಚ್ಚುವರಿ ನೀರನ್ನ ಸಂಗ್ರಹಿಸಬಹುದು.ಇದನ್ನ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು.ಕೇಂದ್ರ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಪ್ರಾಧಿಕಾರದ ಮನವೊಲಿಸಿ ಮೇಕೆದಾಟು ಯೋಜನೆಗೆ ಜಾರಿಗೆ ಅನುಮೋದನೆ ನೀಡಬೇಕು.ಈ ಸಂಬಂಧ ಜೆಡಿಎಸ್ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದೇವೆ.ಮೇಕೆದಾಟು ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟಕ್ಕೆ ರೂಪು ರೇಷೆ ತಯಾರು ಮಾಡುತ್ತಿದ್ದು,ಸಮಸ್ಯೆ ಪರಿಹಾರಕ್ಕಾಗಿ ರಾಷ್ಟ್ರಪತಿಯವರು ಮಧ್ಯ ಪ್ರವೇಶಕ್ಕೆ ಮನವಿ ಮಾಡಿದ್ದೇವೆಂದರು.
ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಬೇಕೆಂದು ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ.ಆದರೆ ಕೇಂದ್ರ ಸರ್ಕಾರದ ಇದುವರೆಗೂ ಒಂದು ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿಲ್ಲ.ಒಂದು ರೂ ಹಣವನ್ನು ಬಿಡುಗಡೆ ಮಾಡಿಲ್ಲ.ಬಿಜೆಪಿ ನಾಯಕರು ಬರೀ ಬೊಳಗೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.