ಯಶವಂತಪುರದಲ್ಲಿ ಜಂಟಿಯಾಗಿ ಸಂಚರಿಸಿದ ಸಚಿವರು : ಆರು ತಿಂಗಳಲ್ಲಿ ರಸ್ತೆ ಅಗಲೀಕರಣಕ್ಕೆ ಸೂಚನೆ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ತೋಟಗಾರಿಕೆ ಸಚಿವ ಮುನಿರತ್ನ ಅವರು ಮಲ್ಲೇಶ್ವರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಗಡಿ ಭಾಗದಲ್ಲಿರುವ ಯಶವಂತಪುರದ ವಿವಿಧ ಪ್ರದೇಶಗಳಿಗೆ ಜಂಟಿಯಾಗಿ ಭೇಟಿ ನೀಡಿ, ಸಂಚಾರ ದಟ್ಟಣೆಗೆ ಪರ್ಯಾಯ ಮಾರ್ಗಗಳ ಬಗ್ಗೆ  ಪರಿಶೀಲಿಸಿದರು.

ಜನರ ಅನುಕೂಲಕ್ಕಾಗಿ ಕೆಲ ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣ ಮಾಡಬೇಕೆಂದು ಸೂಚನೆ ನೀಡಿದರು.

ಯಶವಂತಪುರ ಸರ್ಕಲ್ ಸಮೀಪದ ಮಾರುಕಟ್ಟೆಯ ಖುದ್ದು ಪರಿಶೀಲನೆಗೆ ಬಂದ ಸಚಿವರಿಬ್ಬರು, ಮುಖ್ಯವಾಗಿ ಯಶವಂತಪುರ ವೃತ್ತದಿಂದ ಆರ್ ಟಿಒ ಕಚೇರಿ ಮುಂಭಾಗದಲ್ಲಿರುವ ರಸ್ತೆಯ ಅಗಲೀಕರಣಕ್ಕೆ ಕೂಡಲೇ ಕ್ರಮ ವಹಿಸಬೇಕು. ಆರು ತಿಂಗಳಲ್ಲಿ ಕನಿಷ್ಠ ಅರ್ಧ ಕಾಮಗಾರಿ ಮುಗಿಯುವ ಹಾಗೆ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರಿಗೆ ಸೂಚನೆ ನೀಡಿದರು.

ಯಶವಂತಪುರ ಸರ್ಕಲ್ ನಿಂದ ಮಾರುಕಟ್ಟೆವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಮಾಡುವ ಪ್ರಸ್ತಾವನೆ ಇದೆ. ಟ್ರಾಫಿಕ್ ದಟ್ಟಣೆ ತಪ್ಪಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮುನಿರತ್ನ ತಿಳಿಸಿದರು. ಯಶವಂತಪುರ ಜನಸಂದಣಿ ಪ್ರದೇಶವಾಗಿದೆ. ಜನರಿಗೆ ಮತ್ತು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಅಗತ್ಯವಿದೆ. ರಸ್ತೆಗಳನ್ನು ಉತ್ತಮ ಗಣಕ ಮಟ್ಟದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ದುರ್ನಾತ ಬೀರುತ್ತಿದ್ದ ಅಂಡರ್ʼಪಾಸ್

ಯಶವಂತಪುರ ಮೀನು ಮಾರುಕಟ್ಟೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ಕಂಡು ಸಚಿವರಿಬ್ಬರೂ ಹೌಹಾರಿದರು. ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಈ ಅಂಡರ್ ಪಾಸ್ ನಲ್ಲಿ ಮಳೆ ನೀರು ಹೊರಹೋಗುತ್ತಿರಲಿಲ್ಲ. ಅಲ್ಲದೆ, ಕೊಳಚೆ ನೀರು ಸೇರಿಕೊಂಡು ದುರ್ನಾತ ಬೀರುತ್ತಿತ್ತಲ್ಲದೆ, ಜನರು ಸಂಚಾರ ಮಾಡಲು ಸಾಧ್ಯವಾಗದ ಸ್ಥಿತಿ ಇತ್ತು. ಇದನ್ನು ಕಂಡ ಸಚಿವರಿಬ್ಬರೂ ತಕ್ಷಣ ಇದಕ್ಕೊಂದು ಪರಿಹಾರ ಕಲ್ಪಿಸಬೇಕು ಎಂದು ಸೂಚಿಸಿದರು.  

ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ:

ಯಶವಂತಪುರದಲ್ಲಿ ಯಲಹಂಕ ತಾಲೂಕು ಪಂಚಾಯಿತಿಗೆ ಸೇರಿದ ಜಾಗವಿದ್ದು, ಅದರ ಪಕ್ಕದಲ್ಲಿ ಹೂವಿನ ಮಾರುಕಟ್ಟೆ ಇದೆ. ವ್ಯಾಪಾರಿಗಳು ಬೀದಿ ಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದು ಇದರಿಂದ ಜನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಹೀಗಾಗಿ ಖಾಲಿ ಇರುವ ಜಾಗದಲ್ಲಿ ಸುಸಜ್ಜಿತ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡುವ ಬಗ್ಗೆ ಯೋಜನೆ ಸಿದ್ಧಪಡಿಸಿದ್ದು ಅದರ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಬೇಕು ಎಂದು ಸಚಿವ ಡಾ.ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಜತೆಗೆ, ಪಶ್ಚಿಮ ವಿಭಾಗದ ಆಯುಕ್ತ ಬಸವರಾಜು, ಜಂಟಿ ಆಯುಕ್ತ ಶಿವಸ್ವಾಮಿ ಮುಂತಾದ ಹಿರಿಯ ಅಧಿಕಾರಿಗಳು ಹಾಜರಿದ್ದರು.

More News

You cannot copy content of this page