ಮೈಸೂರು : 2023ರ ಸಾರ್ವತ್ರಿಕ ಚುನಾವಣೆಗೆ 2 ವರ್ಷಗಳು ಬಾಕಿ ಇರುವಾಗಲೇ ಜೆಡಿಎಸ್ ಪಕ್ಷ ಚುನಾವಣಾ ತಯಾರಿ ಆರಂಭಿ ಸಿದೆ.ಮುಂದಿನ ಚುನಾವಣೆಯಲ್ಲಿ123 ಕ್ಷೇತ್ರಗಳನ್ನು ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಈಗಾಗಲೇ ರೂಪುರೇಷೆ ಸಿದ್ದಪಡಿ ಸಲಾಗಿದೆ.ಅಲ್ಲದೆ ಸೆಪ್ಟಂಬರ್ 28ಕ್ಕೆ 110 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
ಮಿಷನ್ 123 ಹೆಸರಿನಲ್ಲಿ ಚುನಾವಣಾ ತಂತ್ರಗಾರಿಕೆ ಯೋಜನೆಯ ನೀಲಿ ನಕ್ಷೆಯನ್ನು ರೂಪಿಸಲಾಗಿದೆ.ಈ ಸಂಬಂಧ ಸೆಪ್ಟಂಬರ್ 28ರಂದು ಮೊದಲ ಪಟ್ಟಿಯಲ್ಲಿ ಆಯ್ಕೆಯಾಗುವ ಸಂಭಾವ್ಯ ಅಭ್ಯರ್ಥಿಗಳಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ,ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,ವೈ.ಎಸ್.ವಿ.ದತ್ತಾ,ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಹಿರಿಯ ನಾಯಕರಿಂದ ತರಬೇತಿಯನ್ನು ಆಯೋಜಿಸಲಾಗಿದೆ.ಕುಮಾರಸ್ವಾಮಿ ಅವರ ಬಿಡದಿಯ ತೋಟದ ಮನೆಯಲ್ಲಿಯೇ ಅಭ್ಯರ್ಥಿಗಳಾಗಲಿವವರಿಗೆ ತರಬೇತಿ ನೀಡಲಾಗುತ್ತದೆ.
ತರಬೇತಿ ವೇಳೆ ರಾಜ್ಯದ ಜನರ ಸಮಸ್ಯೆಗಳು,ಅದಕ್ಕಿರುವ ಪರಿಹಾರೋಪಾಯಗಳು,ಜೆಡಿಎಸ್ ಸರ್ಕಾರ ಗಳು,ಮೈತ್ರಿ ಸರ್ಕಾರಗಳ ವೇಳೆ ಜಾರಿಗೆ ತಂದ ಯೋಜನೆಗಳು,ಕೇಂದ್ರ ಸರ್ಕಾರಗಳಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯಗಳು,ಎರಡೂ ರಾಷ್ಟ್ರೀಯ ಪಕ್ಷಕ್ಕಿಂದ ಪ್ರಾದೇಶಿಕ ಪಕ್ಷದ ಅಸ್ಮಿತೆ,ಅಗತ್ಯತೆ ಮತ್ತು ಅನಿವಾರ್ಯತೆಗಳ ಕುರಿತು ಭಾವೀ ಅಭ್ಯರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗು ವುದು.ಇದರಿಂದ ಕ್ಷೇತ್ರದಲ್ಲಿ ಪ್ರಚಾರ,ಪ್ರವಾಸ,ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಟ್ಟು ಮತದಾರರ ಮನವೊ ಲಿಸಲು ಜೆಡಿಎಸ್ ಪೂರ್ವ ಸಿದ್ದತೆ ನಡೆಸಿದೆ.
ಆದರೆ ಹಾಲಿ ಮತ್ತು ಮಾಜಿ ಜೆಡಿಎಸ್ ಶಾಸಕರ ಪೈಕಿ 15 ಕ್ಕೂ ಹೆಚ್ಚು ಹಾಲಿ,ಮಾಜಿಗಳಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನ ಲಾಗಿದೆ.ಹೀಗಾಗಿ ಸೆಪ್ಟಂಬರ್ 28ರಂದು ಹಾಲಿ ಶಾಸಕರ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆಯೇ ಅಥವಾ ಇಲ್ಲವೇ ಯಾರಿಗೆಲ್ಲಾ ಟಿಕೆಟ್ ಕೈ ತಪ್ಪಲಿದೆ ಎಂಬುದು ಸ್ಪಷ್ಟವಾಗಲಿದೆ.
ಚಾಮುಂಡೇಶ್ವರಿ ಕ್ಚೇತ್ರದ ಶಾಸಕ ಜಿ.ಟಿ.ದೇವೇಗೌಡ,ಗುಬ್ಬಿ ಶಾಸಕ ಶ್ರೀನಿವಾಸ್ (ಗುಬ್ಬಿ ಶ್ರೀನಿವಾಸ್) ನಾಗಮಂಗಲದ ಶಾಸಕ ಸುರೇಶ್ ಗೌಡ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದತ್ತ ಚಿತ್ತ ನೆಟ್ಟಿದ್ದಾರೆ.ಅಂತೆಯೇ ಮಾಜಿ ಶಾಸಕರುಗಳು ಸಹ ಕಾಂಗ್ರೆಸ್ ನಾಯಕರಾದ ಸಿದ್ದ ರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆ ಹಲವಾರು ಸುತ್ತಿನ ಮಾತುಕತೆ ನಡೆಸಿರುವುದು ರಹಸ್ಯವಾಗೇನೂ ಉಳಿದಿಲ್ಲ.
ಟಿಕೆಟ್ ಹಂಚಿಕೆ ಮತ್ತು ಅಭ್ಯರ್ಥಿಗಳ ತರಬೇತಿ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,2023ಕ್ಕೆ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನೀಲಿ ನಕ್ಷೆ ತಯಾರಿಸಲಾಗಿದೆ.ಅದರಂತೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ಚುನಾವಣಾ ತಯಾರಿ,ಸರ್ಕಾರದ ವೈಫಲ್ಯಗಳ ವಿರುದ್ಧ ಜನ ಜಾಗೃತಿ ಮೂಡಿಸಲು ಅಣಿಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.