ಬೆಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಯಾರೂ,ಯಾವುದಕ್ಕೂ ಆತಂಕ ಪಡಬೇಕಾಗಿಲ್ಲ.ಶಿಕ್ಷಣದ ಗುಣಮಟ್ಟ ಹೆಚ್ಚಳ ವಾಗಲಿದ್ದು,ಈ ನೀತಿ ವಿದ್ಯಾರ್ಥಿಗಳ ಪೂರಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮೇಲ್ಮನೆ ಸದಸ್ಯರ ಜೊತೆ ಶಿಕ್ಷಣ ನೀತಿ ಸಂಬಂಧ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಸವಾಲುಗಳಿವೆ ಅಥವಾ ಕಷ್ಟವಿದೆ ಎಂದು ಈಗ ಹಿಂದೆಜ್ಜೆ ಇಟ್ಟರೆ ಮುಂದೆಂದೂ ಜಾರಿ ಮಾಡುವುದು ಕಷ್ಟವಾಗುತ್ತದೆ.ಜ್ಞಾನ ಮತ್ತು ಕೌಶಲ್ಯ ಆಧಾರಿತ ಶಿಕ್ಷಣ ನೀತಿಯನ್ನು ಜಾರಿ ಮಾಡುವುದು ರಾಜ್ಯದ ಪಾಲಿಗೆ ನಿರ್ಣಾಯಕ ಅಂಶವಾಗಿದೆ.ಈ ಮುಂಚೆ ಕಲಾ ಪದವಿ ಪಡೆ ದವರು ಟೆಕ್ನಿಕಲ್ ಕಲಿಯಲು ಅವಕಾಶವಿರಲಿಲ್ಲ.ಕಾಮರ್ಸ್ ನವರು ವಿಜ್ಞಾನ ಕಲಿಯುವುದಕ್ಕೆ ಅವಕಾಶ ಇರಲಿಲ್ಲ.ಈಗ ಯಾರು ಯಾವ ಪಠ್ಯ ಬೇಕಾದರೂ ಕಲಿಯಬಹುದು.ಅಂತಹ ಬಹುಸ್ತರ ವ್ಯವಸ್ಥೆ ಈ ನೀತಿಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೂತನ ಶಿಕ್ಷಣ ನೀತಿಯು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಶಿಕ್ಷಣ ನೀತಿ ಹೇಗೆ ರೂಪಿತವಾಯಿತು? ಅದರ ಹಿಂದೆ ಇರುವ ಎಷ್ಟು ಶ್ರಮದ ಬಗ್ಗೆ, ಪಠ್ಯ ರಚನೆ,ಕಲಿಕೆ, ಬೋಧನೆ,ತರಬೇತಿ ಇತ್ಯಾದಿ ಅಂಶಗಳ ಬಗ್ಗೆ ಸಚಿವರು ನೀಡಿದ ಸಮಗ್ರ ಮಾಹಿತಿ ಬಗ್ಗೆ ಪರಿಷತ್ ಸದಸ್ಯರು ತೃಪ್ತಿ ವ್ಯಕ್ತಪಡಿಸಿದರು.ಸಿಬ್ಬಂದಿ,ಬೋಧಕ ಸಿಬ್ಬಂದಿ ನೇಮಕ,ತರಬೇತಿ ಇತ್ಯಾದಿಗಳ ಬಗ್ಗೆ ಕ್ರಮ ವಹಿಸಲಾಗುವುದು.ಮೂಲಸೌಕರ್ಯಗಳನ್ನು ಹೆಚ್ಚಿಸುವ ಸಂಬಂಧ ಹಂತ ಹಂತವಾಗಿ ಕೆಲಸ ಮಾಡಲಾಗುವುದು ಎಂದ ಅವರು,ಆ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗವುದು ಎಂದು ತಿಳಿಸಿದರು.
ಬೋಧಕರಿಗೆ ತರಬೇತಿ : ಈಗಿನ ಅಧ್ಯಾಪಕ ವರ್ಗ ಶಿಕ್ಷಣ ನೀತಿ ಪ್ರಕಾರವೇ ಬೋಧನೆ ಮಾಡುತ್ತಾರಾ? ಕೆಲವರಿಗೆ ಕಂಪೂಟರ್ ಜ್ಞಾನವೇ ಇರುವುದಿಲ್ಲ.ಅವರನ್ನು ಸಜ್ಜುಗೊಳಿಸುವುದು ಹೇಗೆ? ತರಬೇತಿ ಕೊಡುವುದು ಹೇಗೆ? ಎಂದು ಹಿರಿಯ ಸದಸ್ಯರ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,ಪ್ರತಿ ಹಂತದಲ್ಲಿ ಬೋಧಕರಿಗೆ ವ್ಯವಸ್ಥಿತವಾಗಿ ತರಬೇತಿ ಕೊಡಲಾಗುವುದು.ತಾಂತ್ರಿಕ ನೆರವು, ಅಧ್ಯಯನ ಸಾಮಗ್ರಿ ಸೇರಿ ಪ್ರತಿ ಅಂಶದಲ್ಲೂ ಅವರಿಗೆ ಸಹಕಾರ ನೀಡಲಾಗುವುದು ಎಂದರು.
ಇನ್ನು,ಪ್ರತಿ ವಿವಿ ವ್ಯಾಪ್ತಿಯಲ್ಲಿ ಶಿಕ್ಷಣ ನೀತಿಯ ಬಗ್ಗೆ ವಿಶಾಲವಾಗಿ ಸಮಾಲೋಚನೆ ನಡೆಸಲಾಗಿದೆ.ವಿವಿ ವ್ಯಾಪ್ತಿಯಲ್ಲಿ ಇನ್ನೂ ಕೆಳ ಹಂತಕ್ಕೂ ಈ ಚರ್ಚೆ ವಿಸ್ತರಣೆಯಾಗಲಿದೆ.ಪ್ರತಿ ಕಾಲೇಜು ಮಟ್ಟದಲ್ಲೂ ಚರ್ಚೆ ನಡೆಯುತ್ತದೆ.ಭಾಷೆ ವಿಷಯದಲ್ಲಿ ಕನ್ನಡ ವನ್ನು ಕಡ್ಡಾಯ ಮಾಡಿದ್ದಕ್ಕೆ ಸ್ವಾಗತ ಎಂದ ಕನ್ನಡದ ಜತೆಗೆ ಇಂಗ್ಲಿಷ್ ಭಾಷೆಯನ್ನೂ ಕಲಿಸಬೇಕು.ವಿದೇಶಗಳಲ್ಲಿ ಬಹಳ ಜನ ಉದ್ಯೋಗ ಸಿಕ್ಕಿರುವುದು ಇಂಗ್ಲಿಷ್ ಕಲಿತ ಕಾರಣಕ್ಕೆ.ಹೀಗಾಗಿ ಆ ಭಾಷೆಗೂ ಆದ್ಯತೆ ನೀಡಬೇಕು ಶಾಸಕರು ಸಚಿವರಿಗೆ ಸಲಹೆ ಮಾಡಿ ದರು.ಇದಕ್ಕೆ ಉತ್ತರಿಸಿದ ಸಚಿವರು,ಕನ್ನಡವನ್ನು ಎರಡು ವರ್ಷ ಕಡ್ಡಾಯವಾಗಿ ಕಲಿಯಲೇಬೇಕು.ಅದರ ಜತೆಗೆ ಇಷ್ಟದ ಇತರ ಭಾಷೆಗಳನ್ನು ಕಲಿಯಲು ಅಕಾಶವಿದೆ ಎಂದರು.
14 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಏನಾದರೊಂದು ಪರಿಹಾರ ಕಂಡು ಕೊಳ್ಳಲೇಬೇಕೆಂದು ಮರಿತಿಬ್ಬೇಗೌಡ ಅವರು ಸಲಹೆ ನೀಡಿದರೆ, ಏನೇ ಬದಲಾವಣೆಗಳನ್ನು ತಂದರೂ ಆ ಮಾಹಿತಿಯನ್ನು ನೇಮಕಾತಿ ಸಂಸ್ಥೆಗಳಿಗೆ ತಿಳಿಸಬೇಕು.ಎಲ್ಲ ಹಂತ ದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಪಠ್ಯ ಕ್ರಮ ಬದಲಾಗಬೇಕು ಎಂದು ಸುಶೀಲ ನಮೋಶಿ ಅವರು ಹೇಳಿದರು.
ಉಳಿದಂತೆ, ಸಭೆಯಲ್ಲಿ ಪಾಲ್ಗೊಂಡಿದ್ದ ಅರುಣ್ ಶಹಾಪುರ, ಚಿದಾನಂದ, ನಾರಾಯಣಸ್ವಾಮಿ ಅವರೂ ಎತ್ತಿದ ಪ್ರಶ್ನೆಗಳಿಗೆ ಡಾ.ಅಶ್ವತ್ಥನಾರಾಯಣ ಉತ್ತರ ನೀಡಿದರಲ್ಲದೆ, ಶಿಕ್ಷಣ ನೀತಿಯ ಜಾರಿಗೆ ಎಲ್ಲರ ಸಹಕಾರ ಕೋರಿದರು.
ಅರುಣ್ ಶಹಾಪುರ ಅವರು ರಾಜ್ಯ ಸರ್ಕಾರದ ಪ್ರಯತ್ನದ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿದರು.ಒಂದು ವರ್ಷ ಕಲಿತರೂ ಅವರಿಗೆ ಮಾನ್ಯತೆ ಸಿಗಲಿದೆ.ಇದು ಉದ್ಯೋಗ ಪಡೆಯೋಕು ಸಹಕಾರಿಯಾಗಲಿದೆ.ಮೈನರ್ ಸಬ್ಜೆಕ್ಟ್ ಕಲಿಯುವುದಕ್ಕೂ ಅವಕಾಶವಿದೆ. ಮುಂದೆ ಎರಡು ಆಯ್ಕೆ ವಿಷಯಗಳನ್ನು ತೆಗೆದುಕೊಳ್ಳಬಹುದು.ಈ ವರ್ಷದಿಂದಲೇ ಮೊದಲ ವರ್ಷದ ಎಂಜಿನಿಯರಿಂಗ್, ಪದವಿಗಳಲ್ಲಿ ಈ ನೀತಿ ಜಾರಿಯಾಗಲಿದೆ.ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಮಸ್ಯೆಯಿಲ್ಲ.ವಿದ್ಯಾರ್ಥಿಗಳಿಗೆ ಇದರಿಂದ ಯಾವುದೇ ಗೊಂದಲಗಳು ಉದ್ಭವವಾಗಲ್ಲ.ತರಾತುರಿಯಲ್ಲೂ ಎನ್ ಇಪಿ ಜಾರಿಗೆ ತರುತ್ತಿಲ್ಲ.ಕಾಂಬಿನೇಷನ್ ಬದಲು ವಿಷಯ ಆಯ್ಕೆಗೆ ಅವಕಾಶವಿರುತ್ತದೆ.ಈ ವರ್ಷ ಎಂಜಿನಿಯರಿಂಗ್,ಪದವಿಗೆ ಮಾತ್ರ ಅಳವಡಿಕೆ.ಬಿಎ,ಬಿಕಾಂ,ಬಿಸ್ಸಿಗೆ ಮಾತ್ರ ತರಲಾಗುತ್ತದೆ ನೀತಿ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಕೇಸರೀಕರಣ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಅವರು,ಇದನ್ನು ನಾವು ತರಾತುರಿಯಲ್ಲಿ ಅನುಷ್ಠಾನ ಮಾಡ್ತಿಲ್ಲ.ಕಳೆದ 7 ವರ್ಷದಿಂದಲೂ ಪೂರ್ವ ತಯಾರಿ ನಡೆಸಲಾಗಿದೆ. ಹಂತ ಹಂತವಾಗಿ ಇದರ ಅನುಷ್ಠಾನ ವಾಗುತ್ತಿದೆ.ಮುಂದಿನ 10 ವರ್ಷಗಳಲ್ಲಿ ಹಂತ ಹಂತವಾಗಿ ಅನು ಷ್ಠಾನವಾಗಲಿದೆ.ಒಳ್ಳೆಯದು ಮಾಡಿದರೆ ಕೇಸರಿಕರಣ ಎಂದರೆ ಹೇಗೆ?.ಹಾಗೆ ತಿಳಿದುಕೊಂಡರೆ ನಮ್ಮ ಸಮಸ್ಯೆಯೇನಿಲ್ಲ.ವಿದ್ಯಾರ್ಥಿಗಳು ಯಾವುದನ್ನೂ ಬೇಕಾದರೂ ಕಲಿಯಬಹುದು. ನೀತಿಯನ್ನು ಅಳವಡಿಸಿ ಕೊಳ್ಳುವುದು ವಿವಿಗಳಿಗೆ ಬಿಟ್ಟಿದೆ.ಇದರಲ್ಲಿ ಕೇಸರಿಕರಣ ಎಲ್ಲಿಂದ ಬರುತ್ತದೆ ಎಂದು ಅವರು ಮರು ಪ್ರಶ್ನಿಸಿದರು.
ಕಲಿಕೆಯಲ್ಲಿಸುಧಾರಣೆ ತರಬೇಕು.ಹಾಗಾಗಿಯೇ ಇದನ್ನು ತರುತ್ತಿದ್ದೇವೆ.ಕೇಂದ್ರ ಮೆಚ್ಚಿಸುವುದಕ್ಕೆ ಎನ್ನುವ ಆರೋಪ ಬೇಡ.ಇದರ ಸಿದ್ಧತೆ ಕಳೆದ ಏಳು ವರ್ಷದಿಂದಲೂ ನಡೆಯುತ್ತಿದೆ.ಈಗ ನಾವು ಅದನ್ನು ರಾಜ್ಯ ದಲ್ಲಿ ಜಾರಿ ಮಾಡಿದ್ದೇವೆ.ಇದು ಕರ್ನಾಟಕಕ್ಕೆ ಹೆಮ್ಮೆ ಎನಿಸುವ ವಿಚಾರ.ಕರ್ನಾಟಕ ಶಿಕ್ಷಣದಲ್ಲಿ ಮುಂದಿ ದೆ.ನೂತನ ನೀತಿ ಜಾರಿಯಲ್ಲು ಮುಂದಿದೆ ಅದು ನಮಗೆ ಹೆಮ್ಮೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಎನ್ ಇಪಿ ಜಾರಿಯಿಂದ ಶುಲ್ಕ ಹೆಚ್ಚಳವಿಲ್ಲ: ಎನ್‌ಇಪಿ ಜಾರಿಯಿಂದ ಶಾಲಾ,ಕಾಲೇಜುಗಳ ಶುಲ್ಕ ಹೆಚ್ವಳ ವಾಗುವುದಿಲ್ಲ.ಇದು ತಪ್ಪು ಕಲ್ಪನೆ.ಎಷ್ಟು ವಿದ್ಯಾರ್ಥಿ ಸೇರಿದ್ರೂ ಅಡ್ಮಿಶನ್ ಮಾಡಿಕೊಳ್ತೇವೆ.ಈಗಾಗಲೇ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಧಕ್ಕೆಯಾಗಲ್ಲ.ಕಟ್ಟಡದೊಳಗೆ ಕಲಿಯಬೇಕೆಂಬ ನಿರ್ಬಧವಿತ್ತು. ಈಗ ಆ ನಿರ್ಬಂಧವನ್ನ ಸಡಿಲಿಕೆ ಮಾಡಿದ್ದೇವೆ.ಎಲ್ಲಿ ಬೇಕಾದರೂ ಕಲಿಯಲು ಅವಕಾಶ ಮಾಡಿ ಕೊಟ್ಟಿದ್ದೇವೆ ಎಂದು ವಿವರಿಸಿದರು.