ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಾತ್ಕಾಲಿಕ. ಅದು ಮುಂದಿನ ದಿನಗಳಲ್ಲಿ ಕಡಿಮೆ ಆಗಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಇಂದು ನಡೆದ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಯ ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಯುಪಿಎ ಆಡಳಿತದಲ್ಲಿ ಹಣದುಬ್ಬರವು ಶೇ 15ರಿಂದ 20ರಷ್ಟಿತ್ತು. ಆದರೆ, ಈಗ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆಯು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟಿದೆ ಎಂದರಲ್ಲದೆ, ಡಬಲ್ ಇಂಜಿನ್ ಸರಕಾರ ಕೇಂದ್ರ- ರಾಜ್ಯದಲ್ಲಿದೆ. ಭಾರತ್ ಮಾಲಾದಡಿ ರಸ್ತೆಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಕ್ಕೆ ಆದ್ಯತೆ ಕೊಡಲಾಗುತ್ತಿದೆ ಎಂದು ವಿವರಿಸಿದರು.
ಪ್ರತಿ ಮನೆಗೆ ನೀರು ಒದಗಿಸುವ ಕೆಲಸ ಸಾಗುತ್ತಿದೆ. ರೈತರ ಖಾತೆಗೆ ಆರು ಸಾವಿರ ರೂಪಾಯಿ ಸಂದಾಯ ಮಾಡುತ್ತಿದ್ದೇವೆ. ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕಿದೆ. ಸರಕಾರಕ್ಕೆ ಬರುವ ತೆರಿಗೆ ಭ್ರಷ್ಟಾಚಾರ ರಹಿತವಾಗಿ ಬಳಕೆಯಾಗುತ್ತಿದೆ ಎಂದು ನುಡಿದರು.
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಗರಿಷ್ಠ ಶಾಸಕರನ್ನು ಗೆಲ್ಲಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ದಲ್ಲಾಳಿಗಳ ಯೋಚನೆ ದಲ್ಲಾಳಿಗಳಂತೆ ಇರುತ್ತದೆ. ಅದೇ ಮಾದರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಪಕ್ಷದ ಆಹ್ವಾನಿತ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.