ಬೆಂಗಳೂರು : ಅಂಜನಾಪುರ ಬಡಾವಣೆಯಲ್ಲಿನ ಮೂಲಸೌಕರ್ಯ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಭರವಸೆ ನೀಡಿದ್ದಾರೆ.
ನಗರದಲ್ಲಿಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ,ಅಂಜನಾಪುರ ಬಡಾ ವಣೆಯ ನಿವಾಸಿಗಳು ಮತ್ತು ಬಿಡಿಎ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ವಿಶ್ವನಾಥ್ ಈ ವಿಷಯ ತಿಳಿಸಿದರು.ಬೆಂಗಳೂರು ಜಲಮಂಡಳಿ ನೀರು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆಯನ್ನು ಅಗೆದ ಪರಿಣಾಮ ಗುಂಡಿ ಬಿದ್ದು ಜನಸಾಮಾನ್ಯರಿಗೆ ತೊಂದರೆ ಉಂಟಾಗಿ ದ್ದನ್ನು ಗಮನಿಸಿ ವಿಶ್ವನಾಥ್ ಅವರು,ಸ್ಥಳೀಯ ಶಾಸಕರು ಮತ್ತು ನಿವಾಸಿಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಸಭೆ ನಡೆಸಿದರು.
ಅಂಜನಾಪುರ ಬಡಾವಣೆಯಲ್ಲಿ ರಸ್ತೆ,ಒಳಚರಂಡಿ,ಬೀದಿ ದೀಪ ವ್ಯವಸ್ಥೆ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳ ಕೊರತೆ ಇರುವುದರ ಬಗ್ಗೆ ಶಾಸಕ ಕೃಷ್ಣಪ್ಪ ಮತ್ತು ನಾಗರಿಕರು ಅಧ್ಯಕ್ಷರ ಗಮನಕ್ಕೆ ತಂದರು.ಈ ಬಗ್ಗೆ ಪ್ರತಿಕ್ರಿಯಿಸಿದ ಅವರು,ಹಾಳಾಗಿರುವ ಅಂಜನಾಪುರದ ಕನಕಪುರ ಮತ್ತು ಬನ್ನೇರುಘಟ್ಟ ಮುಖ್ಯರಸ್ತೆಯ ದುರಸ್ತಿಗೆ 25 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಸದ್ಯದಲ್ಲೇ ಈ ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಆರಂಭಿಸಲಾಗುತ್ತದೆ ಎಂದರು.ಅಂಜನಾಪುರ ಬಡಾವಣೆಯ ಇತರೆ ಭಾಗಗಳು ಮತ್ತು ಈ ಬಡಾವಣೆಗೆ ಹೊಂದಿಕೊಂಡಿರುವ ಜೆಪಿ ನಗರ 8 ಮತ್ತು 9 ನೇ ಬ್ಲಾಕ್ ನ ರಸ್ತೆಗಳ ದುರಸ್ತಿ ಕಾಮಗಾರಿಗಳನ್ನು ಹಂತಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು,ಇದಕ್ಕಾಗಿ 40 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿಗೆ ಬಿಡಿಎ ನೀಡಬೇಕಾಗಿರುವ ಹಣವನ್ನು ಆದ್ಯತೆ ಮೇಲೆ ನೀಡಲಾಗುತ್ತದೆ.ಕೇವಲ ಅಂಜನಾಪುರ ಬಡಾವಣೆ ಯಲ್ಲದೇ,ಬಿಡಿಎ ಅಭಿವೃದ್ಧಿಪಡಿಸಿರುವ ಬಡಾವಣೆ ಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಬಿಡಿಎ ಬದ್ಧವಾಗಿದ್ದು,ಆರ್ಥಿಕ ಸಂಪನ್ಮೂಲದ ಲಭ್ಯತೆ ಆಧಾರದಲ್ಲಿ ಹಣ ವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಎಂ.ಕೃಷ್ಣಪ್ಪ ಅವರು, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರು ಅಂಜನಾಪುರ ಬಡಾವಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಮತ್ತು ಆದಷ್ಟೂ ಬೇಗ ಕಾಮಗಾರಿಗಳನ್ನು ಆರಂಭಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.