ಬೆಂಗಳೂರು : ಬಿಬಿಎಂಪಿ ವಾರ್ಡ್ ಗಳಲ್ಲಿ ಒಂದು ಸಾಮೂಹಿಕ ಗಣೇಶೋತ್ಸವಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಇದಕ್ಕೆ ಸ್ಥಳವನ್ನು ಗುರುತಿಸಲಾಗುವುದು ಆ ಬಳಿಕ ಪೊಲೀಸರಿಗೂ ಮಾಹಿತಿ ನೀಡಬೇಕು ಬಿಬಿಎಂಪಿ ಮೂಲಕ ಅನುಮತಿಯನ್ನು ಪಡೆದುಕೊಳ್ಳಬೇಕಾಗಿದೆ. ಹಾಗೆಯೇ ಸಮಿತಿಯವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಬಿಬಿಎಂಪಿ ಮತ್ತು ಪೊಲೀಸ್ ಕಮಿಷನರ್ ತಾಕೀತು ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬಿಬಿಎಂಪಿ ಕಮೀಷನರ್ ಗೌರವ್ ಗುಪ್ತ ಮತ್ತು ಪೊಲೀಸ್ ಕಮೀಷನರ್ ಕಮಲ್ ಪಂತ್ ಗಂಭೀರ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊವಿಡ್ 19ರ ಮೂರನೇ ಅಲೆಯ ಭೀತಿಯ ನಡುವೆ ಗೌರಿ ಗಣೇಶ ಹಬ್ಬ ಆಚರಣೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಮೂರು ದಿನ ಮಾತ್ರ ಹಬ್ಬಕ್ಕೆ ಅನುಮತಿ ನೀಡಲಾಗಿದ್ದು ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ಮತ್ತು ಪೊಲೀಸರ ಕಾರ್ಯ ಹೇಗಿರಬೇಕು ಎಂಬುದರ ಬಗ್ಗೆ ಸಮಗ್ರ ಚರ್ಚಿಸಲಾಗಿದೆ ಎಂದರು.

ಸಾರ್ವತ್ರಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಿದ್ರು ಜನ ಗುಂಪು ಗುಂಪಾಗಿ ಸೇರುವಂತಿಲ್ಲ. ಆರ್ಕೆಸ್ಟ್ರ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ. ಇನ್ನು ವಾರ್ಡ್ ಗಳಲ್ಲಿ ಮೊಬೈಲ್ ಟ್ಯಾಂಕರ್ ಸಂಚರಿಸಲಿದ್ದು ಗಣೇಶ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮನೆಗಳಲ್ಲಿ ಪ್ರತಿಷ್ಟಾಪಿಸುವ ಗಣೇಶನ್ನು ಮನೆಯ ಟ್ಯಾಂಕ್ ನಲ್ಲೇ ವಿಸರ್ಜನೆ ಮಾಡಬೇಕು ಇಲ್ಲವೇ ಮೊಬೈಲ್ ಟ್ಯಾಂಕರ್ ನಲ್ಲಿ ವಿಸರ್ಜಿಸಬೇಕು ಎಂದು ಅವರು ತಿಳಿಸಿದರು.
ಈ ಸಲ ಯಡಿಯೂರು, ಹಲಸೂರು , ಸ್ಯಾಂಕಿ , ಹೆಬ್ಬಾಳ ಸೇರಿದಂತೆ ಯಾವುದೇ ಕೆರೆಗಳಲ್ಲಿ ವಿಸರ್ಜನೆಗೆ ಅವಕಾಶವಿಲ್ಲ ಎಂದು ತೀರ್ಮಾನಿಸಲಾಗಿದೆ. ಇನ್ನು ಪರಿಸರಕ್ಕೆ ಮಾರಕವಾಗುವ ಗಣೇಶವನ್ನು ಕೂರಿಸುವಂತಿಲ್ಲ. ಇನ್ನು ಮೂರು ದಿನಗಳ ಅವಕಾಶ ಬಳಿಕ ಯಾರು ಗಣೇಶ ಕೂರಿಸುವಂತಿಲ್ಲ, ನಿಯಮ ಮೀರಿ ಗಣೇಶ ಪ್ರತಿಷ್ಟಾಪನೆ ಮಾಡಿದ್ರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.. ಸಾರ್ವಜನಿಕರು ಕೊವಿಡ್ ಹಿನ್ನೆಲೆಯಲ್ಲಿ ಸಹಕಾರವನ್ನು ನೀಡಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಒಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ, ಮನೆಯಲ್ಲಿ 2 ಅಡಿ ಎತ್ತರದ ಮೂರ್ತಿಗೆ ಅವಕಾಶ ನೀಡಲಾಗಿದೆ, ಗಣೇಶ ಹಬ್ಬಕ್ಕೆ ಯಾವುದೇ ತೊಂದರೆಯಾಗದಂತೆ ಕೊವಿಡ್ ನಿಯಮಾನುಸಾರ ಗಣೇಶ ಪ್ರತಿಷ್ಟಾಪನೆ ಅವಕಾಶ ಕಲ್ಪಿಸಲಾಗಿದೆ. ಜನ ಎಚ್ಚರ ತಪ್ಪದೆ ಹಬ್ಬವನ್ನು ಆಚರಿಸಬೇಕು ಕೊಂಚ ಯಾಮಾರಿದ್ರು ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ, ಈ ಹಿನ್ನಲೆಯಲ್ಲಿ ಈಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.