ನವದೆಹಲಿ : ದೇಶದ ಭದ್ರತೆಯನ್ನು ಬಲಪಡಿಸಲು ದೇಶದ 19 ಸ್ಥಳಗಳಲ್ಲಿ ವಿಮಾನ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ರಾಜಸ್ಥಾನದ ರಾಷ್ಟ್ರೀಯ ಹೆದ್ದಾರಿ 925ಎʼನಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯ ವನ್ನು ಉದ್ಘಾಟಿಸಿದ ಅವರು,ವ್ಯೂಹಾತ್ಮಕವಾಗಿ ಪ್ರಮುಖವೆನಿಸಿದ ಗಡಿಗಳನ್ನು ರಕ್ಷಿಸುವ ಮೂಲಕ ದೇಶದ ಭದ್ರತೆಯನ್ನು ಈ ಹೆದ್ದಾರಿ ʻರನ್-ವೇʼ ಮತ್ತಷ್ಟು ಬಲಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಸ್ಥಾನದ ಫಲೋಡಿ-ಜೈಸಲ್ಮೇರ್ ರಸ್ತೆ ಮತ್ತು ಬರ್ಮರ್- ಜೈಸಲ್ಮೇರ್ ರಸ್ತೆ,ಪಶ್ಚಿಮ ಬಂಗಾಳ ದ ಖರಗ್‌ಪುರ್-ಬಾಲಸೋರ್ ರಸ್ತೆ,ಖರಗ್‌ಪುರ್-ಕಿಯೋಂಜಾರ್ ರಸ್ತೆ,ತಮಿಳುನಾಡಿನ ಚೆನ್ನೈನ ಪನಘರ್/ಕೆಕೆಡಿ ಬಳಿ,ಪುದುಚೇರಿ ರಸ್ತೆ,ಆಂಧ್ರ ಪ್ರದೇಶದ ನೆಲ್ಲೂರು-ಒಂಗೋಲ್ ರಸ್ತೆ ಮತ್ತು ಒಂಗೋಲ್ -ಚಿಲಕಲೂರಿಪೇಟ್ ರಸ್ತೆ, ಹರಿಯಾಣದ ಮಂಡಿ ಡಬ್ವಾಲಿ-ಓಧನ್ ರಸ್ತೆ, ಪಂಜಾಬ್‌ನ ಸಂಗ್ರೂರ್ ಬಳಿ,ಗುಜರಾತಿನ ಭುಜ್-ನಲಿಯಾ ರಸ್ತೆ ಮತ್ತು ಸೂರತ್-ಬರೋಡಾ ರಸ್ತೆ, ಜಮ್ಮು-ಕಾಶ್ಮೀರದ ಬನಿಹಾಲ್-ಶ್ರೀನಗರ ರಸ್ತೆ,ಅಸ್ಸಾಂನ ಲೇಹ್/ನ್ಯೋಮಾ ಪ್ರದೇಶ ಮತ್ತು ಜೋರ್ಹತ್-ಬಾರಾಘಾಟ್ ರಸ್ತೆ,ಶಿವಸಾಗರ ಬಳಿ,ಬಾಗ್ದೋಗ್ರಾ-ಹಶೀ ಮಾರಾ ರಸ್ತೆ,ಹಶೀಮಾರಾ-ತೇಜ್‌ಪುರ್ ಮಾರ್ಗ ಮತ್ತು ಅಸ್ಸಾಂನ ಹಶೀಮಾರಾ-ಗುವಾಹಟಿ ರಸ್ತೆ ಸೇರಿದಂತೆ ದೇಶದ ಇತರೆ 19 ಸ್ಥಳಗಳಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಗಡ್ಕರಿ ಮಾಹಿತಿ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ದಾಖಲೆಯ ವೇಗದಲ್ಲಿ ಮಾಡಲಾಗುತ್ತಿದೆ.ಈಗ ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಸೇನೆಯ ಬಳಕೆಗೆ ಸಹ ಉಪಯೋಗವಾಗಲಿವೆ.ಇದರಿಂದ ನಮ್ಮ ದೇಶವನ್ನು ಹೆಚ್ಚು ಸುರಕ್ಷಿತ ಗೊಳಿಸಲು ಮತ್ತು ತುರ್ತು ಪರಿಸ್ಥಿತಿಗಳಿಗೆ ಸದಾ ಸನ್ನದ್ಧವಾಗಿರಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್,ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಏರ್‌ಚೀಫ್ ಮಾರ್ಷಲ್ ಆರ್.ಎಸ್. ಭದೌರಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.