ಬೆಂಗಳೂರು : ಕಲಬುರಗಿ ಪಾಲಿಕೆ ಸದಸ್ಯರ ಜೊತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ಅವರ ನಿವಾಸದಲ್ಲಿ ಭೇಟಿ ಮಾಡಿದ ನಾಯಕರು, ಜೆಡಿಎಸ್ ಜತೆ ಸೇರಿ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರ ಹಿಡಿಯುವುದರ ಬಗ್ಗೆ ಚರ್ಚೆ ನಡೆಸಿದರು. ಜೆಡಿಎಸ್ ವರಿಷ್ಠರ ಜೊತೆ ಮಾತುಕತೆ ನಡೆದಿದೆ, ನೀವು ಅಲ್ಲಿಯವರೆಗೆ ತಟಸ್ಥವಾಗಿರಿ, ಬಿಜೆಪಿ ನಾಯಕರ ಸಂಪರ್ಕಕ್ಕೆ ಹೋಗಬೇಡಿ, ಜೆಡಿಎಸ್ ಬೆಂಬಲ ಕೊಡುವ ವಿಶ್ವಾಸವಿದೆ ಎಂದು ಡಿಕೆಶಿ ಕಲಬುರಗಿ ಪಾಲಿಕೆ ಸದಸ್ಯರಿಗೆ ಕಿವಿಮಾತುಹೇಳಿದರು.
ಕಲ್ಬುರ್ಗಿಯಲ್ಲಿ ನಮಗೆ ಒಳ್ಳೆಯ ಫಲಿತಾಂಶ ಸಿಕ್ಕಿದೆ, ಬಿಜೆಪಿ ಸರ್ಕಾರ ಇದ್ದೂ ಅಲ್ಲಿ ಕಡಿಮೆ ಸೀಟು ಗೆದ್ದಿದೆ, ನಮ್ಮವರೇ ಅಲ್ಲಿ ಹೋಗಿ ಗೆದ್ದಿದ್ದಾರೆ, ನಾಳೆ ಹುಬ್ಬಳ್ಳಿ, ಬೆಳಗಾವಿಗೆ ಹೋಗುತ್ತಿದ್ದೇನೆ, ಸದಸ್ಯರನ್ನ ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಗುವುದು, ಕಲ್ಬುರ್ಗಿ ವಿಚಾರದಲ್ಲಿ ಖರ್ಗೆಯವರು, ದೇವೇಗೌಡರ ಜೊತೆ ಚರ್ಚೆ ನಡೆಸಿದ್ದಾರೆ. ಪಕ್ಷಕ್ಕೆ ಲಾಭ ಆಗುವ ರೀತಿ ನಾವು ಪ್ರಯತ್ನ ಮಾಡ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದ್ಯ ಕಲಬುರಗಿಯಲ್ಲಿ ನಡೆಯುತ್ತಿರುವ ವಿದ್ಯಾಮಾನದ ಎಲ್ಲಾವನ್ನೂ ಅಧ್ಯಕ್ಷರಿಗೆ ತಿಳಿಸಿದ್ದೇವೆ, ಪಾಲಿಕೆ ಸದಸ್ಯರು ಗೆದ್ದ ನಂತರ ಡಿಕೆಶಿ ಭೇಟಿ ಮಾಡಿದ್ದಾರೆ, ಜೆಡಿಎಸ್ ಜೊತೆಗೆ ಚರ್ಚೆ ನಡೆದಿದೆ, ಜೆಡಿಎಸ್ ಅವರ ಪಕ್ಷದ ಹಿತಾಸಕ್ತಿ ಯೋಚನೆ ಮಾಡ್ತಿದ್ದಾರೆ, ನಾವು ನಮ್ಮ ಪಕ್ಷದ ಹಿತದ ಬಗ್ಗೆ ಚರ್ಚೆ ಮಾಡ್ತಿದ್ದೇವೆ, ಮೊದಲು ಸರ್ಕಾರ ನೋಟಿಫಿಕೇಷನ್ ಹೊರಡಿಸಲಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬಿಜೆಪಿಯವರು ನಮ್ಮ ಸದಸ್ಯರಿಗೆ ಆಮಿಷ ಒಡ್ಡುತ್ತಿದ್ದಾರೆ, ಬೋರ್ಡ್ ಮೆಂಬರ್ ಮಾಡ್ತೀವಿ, ಸ್ಥಾಯಿ ಸಮಿತಿ ಚೇರ್ ಮನ್ ಮಾಡ್ತೀವಿ ಎಂಬ ಆಮಿಷಗಳನ್ನು ಇಟ್ಟಿದ್ದಾರೆ, ಸರ್ಕಾರ ಆಡಳಿತಯಂತ್ರವನ್ನ ದುರುಪಯೋಗ ಮಾಡಿಕೊಳ್ತಿದೆ, ನೋಟಿಫಿಕೇಷನ್ ಡೇಟ್ ಅನೌನ್ಸ್ ಮಾಡಬೇಕು, ಹುಬ್ಬಳ್ಳಿ, ಕಲಬುರ್ಗಿ ೨ಕಡೆ ಬಿಜೆಪಿಗೆ ಸಂಖ್ಯಾಬಲವಿಲ್ಲ, ಹೀಗಾಗಿ ಅವರು ನೋಟಿಫಿಕೇಷನ್ ಹೊರಡಿಸುತ್ತಿಲ್ಲ ಎಂದು ಆರೋಪಿಸಿದರು.