ಗುಜರಾತ್ : ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿ ಆಡಳಿತ ನಡೆಸುತ್ತಿದ್ದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ಇಂದು ದಿಢೀರ್ ರಾಜೀನಾಮೆ ನೀಡಿದ್ದಾರೆ.
ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್ ರೂಪಾನಿ, ಇದು ಪಕ್ಷದ ನಿರ್ಧಾರ. ನನ್ನ ರಾಜೀನಾಮೆಯಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಪಕ್ಷದ ನಿರ್ಧಾರದ ಬಗ್ಗೆ ನಾನಗೆ ಯಾವುದೇ ರೀತಿಯ ಗೊಂದಲ ಇಲ್ಲ. ನಾಲ್ಕು ವರ್ಷಗಳ ಕಾಲ ಅವಕಾಶ ನೀಡಿದ ಪ್ರಧಾನಿ ಮೋದಿಗೆ ಧನ್ಯವಾದವನ್ನು ಅವರು ಅರ್ಪಿಸಿದ್ದಾರೆ.
ಇದುವರೆಗೂ ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಮುಂದೆ ಪಕ್ಷ ಯಾವುದೇ ಹುದ್ದೆ ನೀಡಿದ್ರೂ ಅದನ್ನು ನಿಭಾಯಿಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮುಂದಿನ ಚುನಾವಣೆಯಲ್ಲಿ ಮತಯಾಚನೆ ಮಾಡಲಾಗುತ್ತದೆ. ಮುಂದಿನ ಮುಖ್ಯಮಂತ್ರಿ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ ಎಂದು ರೂಪಾನಿ ಅಭಿಪ್ರಾಯಪಟ್ಟರು.