ಬೆಂಗಳೂರು : ಗ್ಯಾಸ್, ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಕೊರೊಜತೆ ಬೆಲೆ ಏರಿಕೆಯೂ ಜನರ ಜೇಬು ಸುಡುತ್ತಿವೆ. ಈ ಹಿನ್ನೆಲೆಯಲ್ಲಿ ಏರಿಸಿರುವ ಬೆಲೆಯನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ನಾಯಕರು ಇಂದು ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಬಂದರು.
ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಿಂದ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಹಾಜರಾದರು, ಸಿದ್ದರಾಮಯ್ಯ ಅವರಿಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮೇಲ್ಮನೆ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್, ಮಾಜಿ ಸಚಿವ ಎಂಬಿ ಪಾಟೀಲ್, ಪರಿಷತ್ ಸದಸ್ಯ ನಜೀರ್ ಅಹಮದ್ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.

ಸಿಎಂ ಗೃಹ ಕಚೇರಿ ಮುಂಭಾಗದ ಮೂಲಕವೇ ವಿಧಾನ ಸೌಧಕ್ಕೆ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿಯಲ್ಲಿ ತೆರಳಿದರು. ಬಸವೇಶ್ವರ ವೃತ್ತದ ಬಳಿ ಕಾಂಗ್ರೆಸ್ ಪ್ರತಿಭಟನೆಯನ್ನು ಪೊಲೀಸರು ತಡೆದರು, ಬ್ಯಾರಿಕೇಡ್ ಹಾಕಿ ಪ್ರತಿಭಟನಾ ನಿರತರು ಮುಂದಕ್ಕೆ ಹೋಗದಂತೆ ತಡೆದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಮಣಿದ ಪೊಲೀಸರು, ವಿಧಾನಸೌಧ ಕಡೆ ತೆರಳಲು ಅನುಮತಿ ನೀಡಿದರು.
ವಿಧಾನ ಸೌಧ ಗೇಟ್ ಬಳಿ ಪ್ರತಿಭಟನೆಗೆ ತಡೆ ನೀಡಿದ ಪೊಲೀಸರು
ಬಸವೇಶ್ವರ ವೃತ್ತದಿಂದ ವಿಧಾನಸೌಧಕ್ಕೆ ಎತ್ತಿನಗಾಡಿ ಸಮೇತರಾಗಿ ತೆರಳಿದ ಕಾಂಗ್ರಸ್ ನಾಯಕರು ಅಲ್ಲಿಯೂ ಕೂಡ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಎತ್ತಿನ ಗಾಡಿ ಬಿಡದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಪೊಲೀಸರ ಜೊತೆ ಸಿದ್ದರಾಮಯ್ಯ, ಡಿಕೆಶಿ ವಾಗ್ವಾದ ನಡೆಸಿದರು.
ಸ್ವಲ್ಪ ಸಮಯದ ಬಳಿಕ ಎತ್ತಿನ ಗಾಡಿಯನ್ನು ಪೊಲೀಸರು ವಿಧಾನಸೌಧದ ಆವರಣದ ಒಳಗೆ ಬಿಟ್ಟರು. ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೂಡಲೇ ಬೆಲೆಯನ್ನು ಇಳಿಕೆ ಮಾಡಬೇಕೆಂದು ಆಗ್ರಹಿಸಿದರು.