ಬೆಂಗಳೂರು: ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ವಿಧಾನಸೌಧಕ್ಕೆ ಎತ್ತಿನಗಾಡಿ ಮೇಲೆ ಆಗಮಿಸುತ್ತಿದ್ದ ಕಾಂಗ್ರೆಸ್ ನ ಇಬ್ಬರು ಶಾಸಕರು ಜಾರಿ ಬಿದ್ದು ಪಜೀತಿಗೆ ಒಳಗಾದ ಪ್ರಸಂಗ ವಿಧಾನಸೌಧ ಮುಂಭಾಗ ನಡೆಯಿತು.
ಹತ್ತು ದಿನಗಳ ವಿಧಾನ ಮಂಡಲ ಅಧಿವೇಶನ ಇಂದು ಆರಂಭವಾಗಿದ್ದು, ಕಾಂಗ್ರೆಸ್ ನಾಯಕರು ಅಧಿವೇಶನಕ್ಕೆ ಎತ್ತಿನಗಾಡಿ ಮೂಲಕ ಆಗಮಿಸಲು ತೀರ್ಮಾನಿಸಿದ್ದರು. ಇದರ ಜತೆ ಎಲ್ಲಾ ಶಾಸಕರು ಎತ್ತಿನಗಾಡಿಯಲ್ಲಿ ಆಗಮಿಸುವಂತೆ ಸೂಚಿಸಲಾಗಿತ್ತು. ರಾಜ್ಯ ನಾಯಕರ ಮಾತಿಗೆ ಬೆಲೆ ಕೊಟ್ಟ ಬಹುತೇಕ ಶಾಸಕರು ಇಂದು ವಿಧಾನಸೌಧಕ್ಕೆ ಎತ್ತಿನಗಾಡಿ ಮೂಲಕ ಆಗಮಿಸಿ, ಶಾಸಕರ ಭವನ ಕಡೆಯ ಪ್ರವೇಶ ದ್ವಾರದ ಮೂಲಕ ಒಳ ಪ್ರವೇಶ ಮಾಡಿದ್ದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ನಿವಾಸದಿಂದ ಎತ್ತಿನಗಾಡಿಯ ಮೂಲಕ ಆಗಮಿಸಿದ್ದರು. ಹಲವು ಶಾಸಕರು ತಮ್ಮ ಕ್ಷೇತ್ರದಿಂದ ಬೆಳಗ್ಗೆ ಬೆಂಗಳೂರಿಗೆ ಬಂದಿಳಿದಿದ್ದು ಅನೇಕರು ಎತ್ತಿನಗಾಡಿ ಮೂಲಕ ಆಗಮಿಸಿದ್ದಾರೆ.
ಇದೇ ರೀತಿ ಎತ್ತಿನಗಾಡಿ ಮೂಲಕ ಆಗಮಿಸಿದ ಶಾಸಕರಾದ ಸಂಗಮೇಶ್ ಹಾಗೂ ವೆಂಕಟರಮಣಪ್ಪ ಅವರು ವಿಧಾನಸೌಧದ ಮುಂಭಾಗ ಎತ್ತಿನಗಾಡಿ ಮೇಲೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ತಕ್ಷಣ ಕಾಂಗ್ರೆಸ್ ಮುಖಂಡರು ಹಾಗೂ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಶಾಸಕರಿಬ್ಬರನ್ನು ಮೇಲಕ್ಕೆತ್ತಿ ಉಪಚರಿಸಿದ್ದಾರೆ. ಕೊಂಚ ಸಾವರಿಸಿಕೊಂಡ ನಂತರ ಶಾಸಕರಿಬ್ಬರು ಮತ್ತೆ ಎತ್ತಿನಗಾಡಿಯ ಮೂಲಕ ವಿಧಾನಸೌಧಕ್ಕೆ ತೆರಳಿದ್ದಾರೆ.