ಇಂದಿನಿಂದ ವಿಧಾನ ಮಂಡಲ ಅಧಿವೇಶನ : ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್ ತಯಾರಿ

ಬೆಂಗಳೂರು :ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಲಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಸಜ್ಜಾಗಿದೆ.ಮತ್ತೊಂದೆಡೆ ಜೆಡಿಎಸ್ ಅಳೆದು ತೂಗಿ ಹೆಜ್ಜೆ ಇಡಲು ಜೆಡಿಎಸ್ ಕಾರ್ಯತಂತ್ರ ರೂಪಿಸುತ್ತಿದೆ.ಯಾರ ಬತ್ತಳಿಕೆಯಲ್ಲಿ ಯಾವ ಅಸ್ತ್ರಗಳಿವೆ ಎನ್ನುವುದು ಕಲಾಪದಲ್ಲಿ ಪ್ರದರ್ಶನವಾಗಲಿವೆ.

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ,ಅಗತ್ಯ ವಸ್ತುಗಳ ಬೆಲೆ ಏರಿಕೆ,ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ವಿರುದ್ಧ ಕೇಳಿ ಬಂದಿರುವ ಗುತ್ತಿಗೆ ಹಗರಣ,ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧದ ಭ್ರಷ್ಟಾಚಾರ ಆರೋಪ,ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧದ ಆರೋಪ,ಕಾನೂನು ಸುವ್ಯವಸ್ಥೆ ಕುಸಿತ,ಕೋವಿಡ್ ನಿರ್ವಹಣೆಯಲ್ಲಿ ವಿಫಲತೆ, ಗೊಂದಲಕಾರಿಯಾಗಿ ರುವ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರವನ್ನು  ಕೆಣಕಲು ಕಾಂಗ್ರಸ್ ಮುಂದಾಗಿದೆ.

ಪ್ರಮುಖವಾಗಿ ರಾಜ್ಯದ ಬೊಕ್ಕಸಕ್ಕೆ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ.ವಿವಿಧ ಯೋಜನೆಗೆ, ಸ್ಕೀಂಗಳಿಗೆ ಅನುದಾನ ಬಿಡುಗಡೆ ಯಾಗಿಲ್ಲ.ಗುತ್ತಿಗೆದಾರರಿಗೆ ಭಾರೀ ಪ್ರಮಾಣದ ಹಣ ಬಾಕಿ ಉಳಿಸಿ ಕೊಂಡಿದ್ದು, ಇದರಿಂದ ಅಭಿವೃದ್ಧಿ ಕಾರ್ಯ ಬಹುತೇಕ ಸ್ಥಗಿತ ಗೊಂಡಿದೆ.ವಿಪರೀತ ಸಾಲ ಮಾಡುತ್ತಿದ್ದು, ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿರುವ ಬಿಜೆಪಿ ಆರ್ಥಿಕ ನೀತಿ ವಿರುದ್ಧ ಕಾಂಗ್ರೆಸ್ ಅದರಲ್ಲೂ ಪ್ರಮುಖವಾಗಿ ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಹಾಗೂ ಆರ್ಥಿಕ ವಿಚಾರಗಳನ್ನು ಆಳವಾಗಿ ಬಲ್ಲ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸನ್ನದ್ದರಾಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ತಕ್ಕಮಟ್ಟಿಗೆ ಆರ್ಥಿಕ ವಿಚಾರಗಳನ್ನು ತಿಳಿದುಕೊಂಡಿದ್ದು,ಇವರ ಜತೆ ಸಂಸದೀಯ ವ್ಯಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತಿತರರು ಸರ್ಕಾರವನ್ನು  ಹೇಗೆ ಸಮರ್ಥಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮನೆ ಮಾಡಿದೆ.ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಜೆಡಿಎಸ್ ಸಜ್ಜಾಗಿದೆ.

ಕೋವಿಡ್ ಎರಡನೇ ಅಲೆಯ ನಂತರ ಭಾರೀ ಪ್ರಮಾಣದಲ್ಲಿ ರಾಜ್ಯದಲ್ಲಿ ಉದ್ಯೋಗ ನಷ್ಟವಾಗಿದ್ದು, ಇದರ ಜತೆಗೆ ಜನ ಸಾಮಾ ನ್ಯರ ಆದಾಯವೂ ಕುಸಿತಗೊಂಡಿದೆ. ಜನರ ಸಂಕಷ್ಟ ಹೆಚ್ಚಾಗುತ್ತಿದ್ದು, ಇದಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಗಹನವಾದ ಚರ್ಚೆ ನಡೆಯುವ ನಿರೀಕ್ಷೆಯಿದೆ.

ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳು ಈ ಬಾರಿಯ ಅಧಿವೇಶನದಲ್ಲಿ ಪ್ರತಿಧ್ವನಿಸುವ ನಿರೀಕ್ಷೆಯಿದೆ. ಈ ಭಾಗಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಿ 8 ವರ್ಷ ಪೂರ್ಣಗೊಂಡಿದೆ. ಆದರೆ ಈ ವರೆಗೆ ಅನುದಾನ ಬಿಡುಗಡೆ ಮಾಡಿಲ್ಲ.ಜತೆ ರಾಜ್ಯ ಸರ್ಕಾರ ಕೂಡ ಈ ಭಾಗದ ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸಿಲ್ಲ. ಈ ಕುರಿತು ಈ ಭಾಗದ ಹಿರಿಯ ಮುಖಂಡ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಚರ್ಚೆಗೆ ಸಜ್ಜಾಗಿದ್ದಾರೆ.

ಬಜೆಟ್ ಕಾರ್ಯಕ್ರಮಗಳ ಅನುಷ್ಠಾನ ವಿಳಂಬವಾಗಿರುವುದು, ಕೇಂದ್ರ ಸರ್ಕಾರದ ಹಲವು ಮಹತ್ವಾ ಕಾಂಕ್ಷಿ ಯೋಜನೆಗಳಿಗೆ ಹಣ ಬಿಡುಗಡೆಯಾಗದೇ ಇರುವುದು ಸಹ ಈ ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಲಿದೆ.

ಅಧಿವೇಶನ ಹಿನ್ನೆಲೆಯಲ್ಲಿ ಸರ್ಕಾರದ ಆಡಳಿತ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ,ಅಧಿವೇಶನದ ವೇಳೆ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲಿದ್ದೇವೆ. ಬೆಲೆ ಏರಿಕೆ, ಕೋವಿಡ್ -19 ಸಾಂಕ್ರಾಮಿಕ ನಿಭಾ ಯಿಸುವಲ್ಲಿ ವಿಫಲ,ಕೊರೋನಾ 2ನೇ ಅಲೆ ವೇಳೆ ಸಂಭವಿಸಿದ ಹೆಚ್ಚಿನ ಸಂಖ್ಯೆಯ ಸಾವುಗಳು, ಸರ್ಕಾರವು ಆಸ್ಪತ್ರೆಗಳಿಗೆ ಆಮ್ಲ ಜನಕವನ್ನು ಪೂರೈಸುವಲ್ಲಿ ವಿಫಲವಾಗಿದ್ದು, ರಾಜ್ಯದ ಆರ್ಥಿಕ ಸ್ಥಿತಿ, ಎನ್‌ಇಪಿ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಇತರೆ ಪ್ರಮುಖ ಸಮಸ್ಯೆಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. 

ಸರ್ಕಾರ ಈ ಬಾರಿಯ ಅಧಿವೇಶನದಲ್ಲಿ ಎಷ್ಟು ಮಸೂದೆಗಳನ್ನು ಮಂಡಿಸುತ್ತದೆ ಎಂಬುದು ನಮಗೆ ತಿಳಿದಿಲ್ಲ.10 ಮಸೂದೆಗಳ ಮಂಡಿಸುವುದಾಗಿ ನಮಗೆ ತಿಳಿಸಿದ್ದಾರೆ. ವಿವಾದಿತ ಯಾವುದೇ ಮಸೂದೆಗಳಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿಗ ಳಿಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆಯಿದ್ದು, ಎರಡು ಪಕ್ಷಗಳ ನಡುವೆ ಪರಸ್ಪರ ಸಹಕಾರ ಇರಲಿದೆ. ಬೆಲೆ ಏರಿಕೆಯ ಸಮಸ್ಯೆಯನ್ನು ಕಾಂಗ್ರೆಸ್ ಕೈಗೆತ್ತಿಕೊಳ್ಳುತ್ತಿದೆ ಬೆಲೆ ಏರಿಕೆ ಪರಿಶೀಲಿಸಲು ಸರ್ಕಾರ ಯಾವುದೇ ಕ್ರಮಗ ಳನ್ನು ತೆಗೆದುಕೊಂಡಿಲ್ಲ. ಅಧಿವೇಶನ ನಡೆದು ಆರು ತಿಂಗಳಾಗಿದೆ. ಈ ಬಾರಿ ಹಲವು ಜನಪರ ಸಮಸ್ಯೆಗಳ ಕುರಿತು ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಹೇಳಿದ್ದಾರೆ.

ವಿಶೇಷವೆಂದರೆ ಪ್ರತಿಬಾರಿ ಅಧಿವೇಶನ ಸಂದರ್ಭದಲ್ಲಿ ಧರಣಿ, ಪ್ರತಿಭಟನೆ,ಕೋಲಾಹಲ ವಾತಾವರಣ ನಿರ್ಮಾಣವಾಗುತ್ತಿದ್ದು,ಈ ಭಾರಿಯ ಅಧಿವೇಶನ ಜನಪರ ಸಮಸ್ಯೆಗಳಿಗೆ ವೇದಿಕೆಯಾಗುತ್ತದೆಯೇ ಎನ್ನುವ ಕುತೂಹಲ ಮನೆ ಮಾಡಿದೆ.

More News

You cannot copy content of this page