ಬೆಂಗಳೂರು : ಹಿಂದೂ ದೇವಸ್ಥಾನಗಳ ಅರ್ಚಕರ ಹಿತ ದೃಷ್ಟಿಯಿಂದ ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣ ಮಾಡುವ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ನಗರದ ಸಚಿವರ ಸರ್ಕಾರಿ ನಿವಾಸದಲ್ಲಿ ಕರ್ನಾಟಕ ರಾಜ್ಯ ಮುಜರಾಯಿ ದೇವಸ್ಥಾನಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ಪದಾಧಿಕಾರಿಗಳು ಭೇಟಿ ಮನವಿ ಪತ್ರ ಸಲ್ಲಿಸಿದರು. ನನಗೆ ಮುಜರಾಯಿ ಇಲಾಖೆ ಸಿಕ್ಕಿರುವುದು ಹಿಂದಿನ ಜನ್ಮದ ಪುಣ್ಯ ಅನಿಸುತ್ತದೆ. ನಮಗೆ ಮಾನಸಿಕವಾಗಿ ಶಾಂತಿ ಸಮಾಧಾನ ಬೇಕು, ಅಂದರೆ ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈಮುಗಿದಾಗ ನೆಮ್ಮದಿ ದೊರೆಯುತ್ತದೆ. ನಮ್ಮ ಹಿಂದು ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ನಮ್ಮಲ್ಲಿ ವಿದೇಶಿ ಸಂಸ್ಕೃತಿ ಹೆಚ್ಚುತ್ತಿದೆ, ಆದರೆ, ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಪಾಲನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ನಮ್ಮ ಸಂಸ್ಕೃತಿ ರಕ್ಷಣೆಗೆ ಬದ್ದವಾಗಿದೆ. ಅದಕ್ಕೆ ಅರ್ಚಕರ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.
ಅರ್ಚಕರಿಗೆ ಕ್ಯಾನ್ಸರ್, ಹೃದಯ ಸಂಬಂಧಿ ಆರೋಗ್ಯದ ಸಮಸ್ಯೆಯಾದಾಗ ಅವರಿಗೆ ಆರ್ಥಿಕ ಸಹಾಯ ದೊರೆಯುವಂತೆ ನೋಡಿಕೊಳ್ಳಲು ವಿಮೆ ಜಾರಿಗೊಳಿಸುವ ಬಗ್ಗೆ ಅಧಿವೇಶನದ ಬಳಿಕ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ತಸ್ತಿಕ್ ಹಣ ಪಡೆಯಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವು ಎಂದು ತಿಳಿಸಿದರು.

ಅರ್ಚಕರ ಮಕ್ಕಳಿಗೆ ಪೂಜಾ ತರಬೇತಿ ನೀಡಲು ಪಂಡಿತರನ್ನು ಕರೆದು ತರಬೇತಿ ನೀಡುವುದು, ಸಾಮಾನ್ಯ ಸಂಪ್ರದಾಯ ನಿಧಿಯಿಂದ ಬ್ರಹ್ಮೋತ್ಸವ ನಡೆಸಲು ಸರ್ಕಾರದಿಂದ ಆರ್ಥಿಕ ಸಹಾಯ ಹಾಗೂ ಅರ್ಚಕರು ಮನೆ ನಿರ್ಮಿಸಿಕೊಳ್ಳಲು ಕನಿಷ್ಠ ಐದು ಲಕ್ಷ ಸರ್ಕಾರದಿಂದ ಹಣ ಮಂಜೂರು ಮಾಡುವಂತೆ ಮನವಿ ಮಾಡಿದರು.