ಕರ್ನಾಟಕ ರಾಜ್ಯ ಅಕ್ರಮ ವಲಸಿಗರ ನೆಲೆಯಾಗಲು ಬಿಡುವುದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲಸಿರುವ ವಿದೇಶಿಯರನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಪೊಲೀಸರಿಗೆ ಸ್ಪಷ್ಟ ನಿರ್ದೇಶನವನ್ನ ಈಗಾಗಲೇ  ನೀಡಲಾಗಿದೆ ಹಾಗೂ ಇದಕ್ಕಾಗಿ ವಿಶೇಷ ಕಾರ್ಯಾಚರಣೆ  ನಡೆಸಲು ಸೂಚಿಸಲಾಗಿದೆ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ ನಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಮುನಿರಾಜು ಗೌಡರ ಪ್ರಶ್ನೆಗೆ ಉತ್ತರಿಸುತ್ತಾ, ರಾಜ್ಯದಲ್ಲಿ ಅನಧಿಕೃತವಾಗಿ ಹಾಗೂ ಅಕ್ರಮವಾಗಿ ನೆಲಸಿರುವ ವಿದೇಶಿ ಪ್ರಜೆಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಕ್ರಮವಾಗಿ ನೆಲಸಿರುವ ವಿದೇಶಿಗರಿಗೆ ಆಧಾರ್ ಕಾರ್ಡ್ ಹಾಗೂ ಗುರಿತಿನ ಚೀಟಿಯನ್ನು ಮಾಡಿಕೊಟ್ಟ ಒಂದು ಪ್ರಕರಣವು ಬೆಂಗಳೂರು ನಗರದಲ್ಲಿ ವರದಿಯಾಗಿದ್ದು, ಒಬ್ಬ ವೈದ್ಯಾಧಿಕಾರಿಯನ್ನು ಅಮಾನತಿನಲ್ಲಿಡಲಾಗಿದೆ ಹಾಗೂ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಕ್ರಮವಾಗಿ ಯಾವುದೇ ಬಾಂಗ್ಲಾದೇಶಿ ನಾಗರಿಕರು  ಅಥವಾ ರೋಹಿಂಗ್ಯಾ ಮುಸ್ಲಿಮರು, ಮಸೀದಿ ಅಥವಾ ಮದರಸಾಗಳಲ್ಲಿ ವಾಸವಾಗಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೆ ಅಕ್ರಮ ವಲಸಿಗರು ಆಶ್ರಯ ಪಡೆದಿರುವುದನ್ನು ನಿಯಂತ್ರಿಸಲು ಎಲ್ಲಾ ನಗರ ಮತ್ತು ಜಿಲ್ಲಾ ಮಟ್ಟದಲ್ಲಿ “ಸ್ಪೆಷಲ್ ಟಾಸ್ಕ್ ಫೋರ್ಸ್” ರಚಿಸಲಾಗಿದೆ ಎಂದು ಗೃಹ ಸಚಿವರು ಸದನಕ್ಕೆ ಭರವಸೆ ನೀಡಿದರು.

More News

You cannot copy content of this page