ಚಿತ್ರ ವಿಚಿತ್ರವಾದ ಗೆಟಪ್, ಭಿನ್ನ-ವಿಭಿನ್ನ ಹೇರ್ ಸ್ಟೈಲ್, ಉಲ್ಟಾಪಲ್ಟಾ ಸ್ಕ್ರೀನ್ ಪ್ಲೇ, ಡಿಫರೆಂಟ್ ಸ್ಟೋರಿ, ಉದ್ದುದ್ದ ಡೈಲಾಗ್ಸ್, ಒಮ್ಮೆಲೆಗೆ ಅರ್ಥವಾಗದ ಸಿನಿಮಾ, ಇವರ ಸಿನಿಮಾವನ್ನ ಒಮ್ಮೆ ನೋಡಿ ಅರ್ಥ ಮಾಡಿಕೊಂಡವನು ನಿಜವಾದ ಬುದ್ಧಿವಂತ.
ಯಾಕಂದ್ರೆ ಇವರ ಸಿನಿಮಾ ಮೂರ್ನಾಲ್ಕು ಬಾರಿ ನೋಡಿದ್ರೆ ಮಾತ್ರಾನೇ ಅರ್ಥ ಆಗೋದು. ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತಾನೆ ಸೌಂಡ್ ಮಾಡಿಕೊಂಡು ಬಂದ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಉಪೇಂದ್ರ ಇಂದಿಗೂ ಅದೇ ಡಿಫರೆಂಟ್ ಮ್ಯಾನರಿಸಂ ಉಳಿಸಿಕೊಂಡಿದ್ದಾರೆ. ಉಪ್ಪಿ ಸಿನಿಮಾ ಅಂದ್ರೇನೆ ಹಾಗೆ ಎಲ್ಲದರಲ್ಲೂ ಡಿಫ್ರೆಂಟ್. ಸಿನಿಮಾದ ಟೈಟಲ್ ಕಾರ್ಡ್ ನಿಂದ ದಿ ಎಂಡ್ ವರೆಗೂ ಎಲ್ಲವೂ ಡಿಫರೆಂಟ್.
ಸದ್ಯ ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ತಮ್ಮ 53 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಈ ಬಾರಿಯ ಹುಟ್ಟು ಹಬ್ಬಕ್ಕೆ ಉಪ್ಪಿ ಬೆಂಗಳೂರಿನಲ್ಲಿ ಇರದ ಕಾರಣ ಅಭಿಮಾನಿಗಳು ತಾವು ಇರುವಲ್ಲಿಯೇ ಹರಸಿ ಹಾರೈಸಿ ಅಂತಾ ನಿನ್ನೆಯಷ್ಟೇ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ರು.
ಇದರಿಂದ ಕೊಂಚ ಬೇಸರವಾದ ಉಪ್ಪಿ ಅಭಿಮಾನಿ ಬಳಗಕ್ಕೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಹೌದು, ಉಪ್ಪಿ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಕಬ್ಜ’ ಚಿತ್ರದ ಮೋಷನ್ ಪೊಸ್ಟರ್ ಇಂದು ಉಪ್ಪಿ ಬರ್ತ್ಡೇಗೆ ರಿಲೀಸ್ ಆಗಿದೆ.
ನಟ ಮತ್ತು ನಿರ್ದೇಶಕ ಉಪೇಂದ್ರ 1967 ಸೆಪ್ಟೆಂಬರ್ 18ರಂದು ಕುಂದಾಪುರ ಬಳಿಯ ಕೋಟೇಶ್ವರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಂಜುನಾಥ್ ರಾವ್ ಹಾಗೂ ಅನಸೂಯ ದಂಪತಿಗಳ ದ್ವಿತೀಯ ಪುತ್ರ ಉಪೇಂದ್ರ. ಎಪಿಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದ ಉಪ್ಪಿಗೆ ಆಗಲೇ ಕ್ರೇಜ್ ಶುರುವಾಗಿತ್ತು.
ಆಗ ಇವರನ್ನು ಗುರುತಿಸಿ ಬೆನ್ನು ತಟ್ಟಿದವರು ಕಾಶಿನಾಥ್. ನಿರ್ದೇಶಕ ಮತ್ತು ನಟ ಕಾಶಿನಾಥ್ ಜೊತೆ ಸಹಾಯಕ ನಿರ್ದೇಶಕರಾಗಿ ಹಾಗೂ ಸಾಹಿತ್ಯಗಾರರ ಕೆಲಸ ನಿರ್ವಹಿಸಿದ್ದರು. 1992 ರಲ್ಲಿ ತೆರೆಗೆ ಬಂದ ‘ತರ್ಲೆ ನನ್ ಮಗ’ ಸಿನಿಮಾ ಮೂಲಕ ಸಂಪೂರ್ಣ ನಿರ್ದೇಶಕನಾಗಿ ಬಡ್ತಿ ಪಡೆದರು. ಅಂದಿನಿಂದ ಇಂದಿನವರೆಗೂ ಉಪ್ಪಿ ಹಿಂದಿರುಗಿ ನೋಡಲೇ ಇಲ್ಲ. ಉಪೇಂದ್ರ ಏನ್ ಮಾಡಿದ್ರು ಅದು ಡಿಫ್ರೆಂಟಾಗಿ ಕಾಣುತ್ತಿತ್ತು. ತರ್ಲೆ ನನ್ ಮಗ ಸಿನಿಮಾ ಪಡ್ಡೆ ಹೈಕಳ ಫೇವರೆಟ್ ಸಿನಿಮಾವಾಗಿತ್ತು.
ತರ್ಲೆ ನನ್ ಮಗ ಡಿಫರೆಂಟ್ ಸಿನಿಮಾದ ಬಳಿಕ ಉಪ್ಪಿ ಮತ್ತೆ ಕೈ ಹಾಕಿದ್ದು ಹಾರರ್ ಕ್ಯಾಟಗರಿ ಸಿನಿಮಾಗೆ. 1993 ರಲ್ಲಿ ‘ಶ್’ ಎಂಬ ಹಾರರ್ ಚಿತ್ರ ನಿರ್ಮಿಸಿ ಉಪೇಂದ್ರ ಸೈ ಎನಿಸಿಕೊಂಡಿದ್ದರು. 1995 ರಲ್ಲಿ ತೆರೆಗೆ ಬಂದ ಉಪ್ಪಿ ನಿರ್ದೇಶನ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಓಂ’ ಸಿನಿಮಾ, ಉಪೇಂದ್ರರವರ ಬದುಕನ್ನೇ ಬದಲಾಯಿಸಿತು.
ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿ ಮಾಡಿತ್ತು. ಇಂದಿಗೂ ಓಂ ಸಿನಿಮಾ ಸೃಷ್ಟಿಸಿದ ಹವಾ ಇತಿಹಾಸವೇ ಸರಿ. ಇಂದಿಗೂ ಆ ಸಿನಿಮಾ ತೆರೆಕಂಡರೂ ಹೌಸ್ ಫುಲ್ ಪ್ರದರ್ಶನ ಕಾಣುತ್ತೆ. ಅಷ್ಟರಮಟ್ಟಿಗೆ ಆ ಸಿನಿಮಾ ಉಪ್ಪಿ ಬದುಕಲ್ಲಿ ಅಚ್ಚಳಿಯದೆ ಉಳಿದಿದೆ. ಇದಾದ ಬಳಿಕ ಉಪ್ಪಿ ‘ಆಪರೇಷನ್ ಅಂತ’, ‘ಸ್ವಸ್ತಿಕ್’ ಚಿತ್ರಗಳನ್ನು ನಿರ್ದೇಶನ ಮಾಡಿದರು.
ಇದಾದ ಬಳಿಕ 1998ರಲ್ಲಿ ಮತ್ತೊಂದು ವಿಭಿನ್ನ ಕಥೆಯನ್ನಿಟ್ಟುಕೊಂಡು ಈ ಸಿನಿಮಾ ಮೂಲಕ ಸ್ವತಃ ನಾಯಕನಾಗಿ ಪಾದಾರ್ಪಣೆ ಮಾಡಿದರು. ನಂತರ ಉಪೇಂದ್ರ ಎಂಬ ಹೆಸರಿನಲ್ಲೇ ಸಿನಿಮಾ ಮಾಡಿದರು. ಅಷ್ಟೊತ್ತಿಗಾಗಲೇ ರಿಯಲ್ ಸ್ಟಾರ್ ಉಪೇಂದ್ರಗೆ ಅಸಂಖ್ಯಾತ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಇದಾದ ಬಳಿಕ ಉಪ್ಪಿ ಹತ್ತು ವರ್ಷಗಳ ಕಾಲ ನಿರ್ದೇಶನಕ್ಕೆ ಬ್ರೇಕ್ ಕೊಟ್ಟಿದ್ರು. ಉಪೇಂದ್ರ ಕನ್ನಡ ಚಿತ್ರರಂಗಕ್ಕೆ ಅಷ್ಟೇ ಸೀಮಿತವಾಗದೆ. ಪರಭಾಷೆಯಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿದ್ದಾರೆ.
ಸದ್ಯ ಉಪೇಂದ್ರ ಮತ್ತೊಮ್ಮೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೆಲಕಾಲ ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದ ಉಪೇಂದ್ರ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿರುವುದು ಉಪ್ಪಿ ಫ್ಯಾನ್ಸ್ ಎದೆಯಲ್ಲಿ ಪುಳಕ ಹುಟ್ಟಿಸಿದೆ.