ಬೆಂಗಳೂರು : ಸಿನಿಮಾ ಮಂದಿರಗಳು ಸದ್ಯಕ್ಕೆ ಶೇ 50 ರಷ್ಟು ಮಾತ್ರ ಭರ್ತಿಗೆ ಅವಕಾಶ ನೀಡಲಾಗಿದೆ, ಇದು ಪೂರ್ತಿ ಪ್ರೇಕ್ಷಕರ ಭರ್ತಿಗೆ ಸರ್ಕಾರ ಅನುಮತಿ ನೀಡಬೇಕೆಂದು ಸಿನೆಮಾ ನಿರ್ಮಾಪಕರು ಇಂದು ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರು,
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸಿನಿಮಾ ರಂಗಕ್ಕೆ ಸೇರಿದವರು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರ ಬಗ್ಗೆ ಅರಿವಿದೆ, ಆದ್ದರಿಂದ ಈಗಾಗಲೇ ತಾಂತ್ರಿಕ ಪರಿಣಿತರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಿನಿಮಾ ಮಂದಿರಗಳಿಗೆ ಶೇ ನೂರರಷ್ಟು ಪ್ರೇಕ್ಷಕರನ್ನು ಭರ್ತಿ ಮಾಡುವ ಅವಕಾಶ ಸಿಗಬಹುದು ಎಂಬ ಆಶಾಭಾವನೆಯನ್ನು ಸಚಿವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಎಲ್ಲದಕ್ಕೂ ತಜ್ಞರ ಸಲಹೆಯೇ ಅಂತಿಮ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ನಿರ್ಮಾಪಕ ಸೂರಪ್ಪ ಬಾಬು ಮಾತನಾಡಿ, ಆರೋಗ್ಯ ಸಚಿವರ ಜೊತೆ ಮಾತನಾಡಿದ್ದೇವೆ. ಬಿಬಿಎಂಪಿ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಜತೆ ಚರ್ಚೆ ಮಾಡಿ ತೀರ್ಮಾನಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಭೆ ನಂತರ ಗುಡ್ ನ್ಯೂಸ್ ಕೊಡ್ತೀವಿ ಅಂದಿದ್ದಾರೆ, ನಾವೂ ಕೂಡಾ ಒಳ್ಳೆಯ ಸುದ್ದಿಯ ನಿರೀಕ್ಷೆ ಯಲ್ಲಿ ಇದ್ದೇವೆ ಎಂದು ತಿಳಿಸಿದರು.
ಕೊರೊನಾ ಈಗ 600 ರಿಂದ 800 ಕೇಸ್ ಪ್ರತಿದಿನ ದಾಖಲಾಗುತ್ತಿವೆ, ಇದು ಶೇ.1 ಕ್ಕಿಂತ ಕಡಿಮೆ, ಎಲ್ಲಾ ಜಿಲ್ಲೆಗಳಲ್ಲಿ ಸೋಂಕು ಕಡಿಮೆಯಾದ್ರೆ ಎಲ್ಲಾವನ್ನೂ ಸಡಿಲ ಮಾಡೋದಾಗಿ ಸಚಿವರು ಹೇಳಿದ್ದಾರೆ ಎಂದು ತಿಳಿಸಿದರು.
ಹತ್ತು ದಿನದ ಹಿಂದೆ ಸಿಎಂ ಭೇಟಿಯಾಗಿದ್ದೆವು, ಪೂರಕ ವಾತಾವರಣ ಇರೋದ್ರಿಂದ ಮಾಡಿಕೊಡೋಣ ಅಂತ ಅವರು ಹೇಳಿದ್ದಾರೆ. ಹತ್ತು ದಿನದಿಂದ ಟೆಕ್ನಿಕಲ್ ಟೀಮ್, ಬಿಬಿಎಂಪಿ ಹಾಗೂ ತಜ್ಞರ ಜೊತೆ ಕೂತು ಮಾತನಾಡಿದ್ದಾರೆ. ಶೀಘ್ರವೇ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.