ಬೆಂಗಳೂರು : ರಾಜ್ಯದಲ್ಲಿ ಸ್ಯಾಟಲೈಟ್ ಫೋನ್ಗಳ ಬಳಕೆ ಆಗ್ತಿರೋದು ಪತ್ತೆಯಾಗಿದೆ, ಅಂತರಾಷ್ಟ್ರೀಯ ಮಟ್ಟದ ಕರೆಗಳನ್ನು ಮಾಡಲಾಗುತ್ತಿವೆ, ಈ ಬಗ್ಗೆ ಪೊಲೀಸರು ಅಲರ್ಟ್ ಆಗಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನ ಸಭೆಗೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಶಾಸಕ ಯು.ಟಿ ಖಾದರ್, ಜನರು ಗೊಂದಲ ದಲ್ಲಿದ್ದಾರೆ, ಈ ಬಗ್ಗೆ ತನಿಖೆ ನಡೆಸಿ ಅಧಿಕೃತ ಹೇಳಿಕೆಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಒಂದು ವರ್ಷದ ಹಿಂದೆಯೂ ಸ್ಯಾಟಲೈಟ್ ಫೋನ್ ಬಗ್ಗೆ ಸದ್ದಾಗಿತ್ತು, ಅದರಂತೆಯೇ ಈಬಾರಿಯೂ ಸದ್ದು ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವರು ಕೇಂದ್ರ ಗುಪ್ತಚರ, ರಾ ಜತೆ ನಿರಂತರ ಸಂಪರ್ಕದಲ್ಲಿ ನಮ್ಮ ಪೊಲೀಸರು ಇದ್ದಾರೆ. ಅವರ ಮೇಲೆ ಕಣ್ಣಿಟ್ಟಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಸ್ಯಾಟಲೈಟ್ ಫೋನ್ ಬಳಕೆ ದೇಶದಲ್ಲಿ ನಿಷೇಧಿಸಲಾಗಿದೆ, ಆದರೂ ಅಲ್ಲಲ್ಲಿ ಬಳಕೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ, ಗುಪ್ತಚರ ಇಲಾಖೆಯ ಜೊತೆ ಪೊಲೀಸರು ಕಣ್ಣಿಡುತ್ತಿದ್ದಾರೆ, ಯಾವುದೇ ಗಾಬರಿಗೆ ಅವಕಾಶ ಇಲ್ಲ, ಇದರ ಮೂಲ ಪತ್ತೆ ಹಚ್ಚುವ ಕೆಲಸ ಮಾಡಲಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ನಿನ್ನೆ ಬಂಧನ ಮಾಡಿರುವ ವ್ಯಕ್ತಿಯನ್ನು ಪೋಲೀಸರು ವಿಚಾರಣೆಗೆ ತಮ್ಮ ವಶಕ್ಕೆ ಪಡೆದಿದ್ದಾರೆ. ಆತ ಯಾರ ಜತೆ ಯಾವ ರೀತಿಯ ಸಂಪರ್ಕ ಇಟ್ಟುಕೊಂಡಿದ್ದಾನೆ ಎನ್ನುವುದನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಏಜೆಂಟ್ ಅನ್ನು ಅರೆಸ್ಟ್ ಮಾಡಲಾಗಿದೆ, ಮಿಲಿಟರಿ ಅಧಿಕಾರಿಗಳ ಸೂಚನೆ ಮೇರೆಗೆ ಅರೆಸ್ಟ್ ಮಾಡಿದ್ದಾರೆ, ಅವನು ಮಾಡ್ತಾ ಇದ್ದ ಎಲ್ಲಾ ಕೆಲಸಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ, ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದರಿಂದ ಆತಂಕ ಮೂಡಿದೆ. ಆದ್ರೆ ನಮ್ಮ ಭದ್ರತಾ ಸಿಬ್ಬಂದಿ ಮೇಲೆ ನಮಗೆ ನಂಬಿಕೆ ಇದೆ, ಅವರು ಈ ಪ್ರಕರಣವನ್ನೂ ಬೇಧಿಸಲಿದ್ದಾರೆ ಎಂದು ತಿಳಿಸಿದರು.