ಶಿವಮೊಗ್ಗ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಸುಮಾರು ಒಂದೂವರೆ ವರ್ಷ ಇದ್ದರೂ ಸಹ ಜೆಡಿಎಸ್ ಈಗಾಗಲೇ ಚುನಾವಣಾ ತಯಾರಿ ಆರಂಭಿಸಿದೆ. ಸೆಪ್ಟಂಬರ್ 27ರಂದು ರಾಜ್ಯದ 140 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಭದ್ರಾವತಿ ಸಮೀಪ ಗೋಣಿಬೀಡಿನಲ್ಲಿ ಮಾಜಿ ಶಾಸಕ ಎಂ ಜೆ ಅಪ್ಪಾಜಿಗೌಡ ಅವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ಇದೇ ತಿಂಗಳ 27ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಅಂದು ಎಲ್ಲಾ ಕ್ಷೇತ್ರದ ಆಕಾಂಕ್ಷಿಗಳು ಭಾಗವಹಿಸಲಿದ್ದಾರೆ.
ಒಂದೆಡೆ ಹಿಂದುತ್ವ ಇನ್ನೊಂದೆಡೆ ದೇವಸ್ಥಾನ ಒಡೆಯುವುದು ಇದು ಬಿಜೆಪಿ ನೀತಿ
ನಂಜನಗೂಡಿನಲ್ಲಿಯ ದೇವಾಲಯ ಧ್ವಂಸ ಪ್ರಕರಣದಲ್ಲಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಬಿಜೆಪಿ ದೇವಾಲಯ ರಕ್ಷಣಾ ಕಾಯಿದೆಯನ್ನು ಜಾರಿ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಒಂದೆಡೆ ಹಿಂದುತ್ವದ ಹೆಸರು ಹೇಳುತ್ತಾ ಮತ್ತೊಂದೆಡೆ ದೇವಸ್ಥಾನ ಒಡೆಯುತ್ತಿದ್ದಾರೆ. ಇದು ಬಿಜೆಪಿಯ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.,
ಡಿಸೆಂಬರ್ ನಂತರ ಮಾಜಿ ಪ್ರಧಾನಿ ದೇವೇಗೌಡರ ಗರಡಿಯಲ್ಲಿ ಬೆಳೆದ ಎಲ್ಲಾ ಮುಖಂಡರನ್ನು ಒಗ್ಗೂಡಿಸಲಾಗುವುದು, ಹಾಗೂ ಮುಂದಿನ ದಿನದಲ್ಲಿ ಕುಮಾರಸ್ವಾಮಿ ನೇತೃತವದ ಸ್ವಾಭಿಮಾನಿ ಸರ್ಕಾರ ಅಸ್ಥಿತ್ವಕ್ಕೆ ಬರುವಂತೆ ಕಾರ್ಯತಂತ್ರ ರೂಪಿಸಲಾಗುವುದು ಎಂದು ತಿಳಿಸಿದರು.