ಕೆರೆ ಒತ್ತುವರಿ ತೆರವಿಗೆ ದಿಟ್ಟ ಕ್ರಮ: ಪ್ರತಿ ಶನಿವಾರ ತೆರವು ಕಾರ್ಯ: ಆರ್ ಅಶೋಕ್

ಬೆಂಗಳೂರು: ಪ್ರತಿ ಶನಿವಾರ ಎಲ್ಲ ಕೆಲಸ ಬಿಟ್ಟು ಬೆಂಗಳೂರಿನ ಕೆರೆ ಒತ್ತುವರಿ ತೆರವು ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ರಾಜ್ಯದ ಕೆರೆ ಒತ್ತುವರಿ ತೆರವಿಗೆ ಸರ್ಕಾರದ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.  ಅಶೋಕ್ ಭರವಸೆ ಸದನಕ್ಕೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಅಪ್ಪಾಜಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರಿನ ಹಲವು ಕೆರೆ ಜಾಗಗಳಲ್ಲಿ ಬಸ್ ನಿಲ್ದಾಣ, ಬಿಡಿಎ ಲೇಔಟ್ ಗಳು ತಲೆ ಎತ್ತಿವೆ. ಬಿಡಿಎ ಭೂ ಕಬಳಿಕೆ ಮಾಡಿಕೊಂಡಿದೆ, ಕೆರೆಗಳ ಒತ್ತುವರಿಯಲ್ಲಿ ಬಿಡಿಎಗೆ ಮೊದಲ ಸ್ಥಾನವಾಗಿದ್ದು, ಖಾಸಗಿಯವರೂ ಒತ್ತುವರಿ ಮಾಡಿದ್ದಾರೆ ಎಂದು ಸದನದ ಗಮನಕ್ಕೆ ತಂದರು.

ಇದಕ್ಕೆ ಉತ್ತರ ನೀಡಿದ ಸಚಿವ ಆರ್ ಅಶೋಕ್, ಇದೆಲ್ಲಾ ಹಿಂದೆ ಆಗಿದೆ ಈಗ ಆಗಲು ಬಿಡುವುದಿಲ್ಲ. ಹಾಗಾಗಿಯೇ ಪ್ರತಿ ಶನಿವಾರ ಡಿಸಿಗಳು ಕೆರೆಗಳ ಒತ್ತುವರಿ ತೆರವು ಮಾಡಲು ಸೂಚನೆ ನೀಡಲಾಗಿದೆ. ಇರುವ ಕೆರೆ ಉಳಿಸಬೇಕಿದೆ, ಆ ದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದರು.

ಕೆರೆಗಳ ಒತ್ತುವರಿ ಜಾಗದಲ್ಲಿ ಮನೆ ಕಟ್ಟಿದ್ದಾರೆ, ಖಾತೆ, ಕಂದಾಯ ಕಟ್ಟಿದ್ದಾರೆ, ತೆರಿಗೆ ಕಟ್ಟಿದ್ದಾರೆ, ಬಿಜೆಪಿ ಸರ್ಕಾರವಿದ್ದರೆ ತೆರವು ಜಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆ ಮಾಡಲಿದೆ, ಅಮಾಯಕರನ್ನು ತೆರವು ಮಾಡಲಾಗುತ್ತಿದೆ ಅಂತಾ ಆರೋಪಿಸಲಿದೆ ತೆರವು ಮಾಡದೇ ಇದ್ದರೆ ಮೌನವಾಗಿದೆ, ಕಣ್ಣು ಕಿವಿವಿಲ್ಲದ ಸರ್ಕಾರ ಎನ್ನುತ್ತಾರೆ. ಹಾಗಾಗಿ ಇದು ಸದನದ ಎಲ್ಲರೂ ಸೇರಿ ನಿರ್ಧಾರ ಮಾಡಬೇಕು. ನಾವು ವಿರೋಧ ಪಕ್ಷದಲ್ಲಿದ್ದಾಗ ನಾವು ವಿರೋಧ, ನಾವು ಇದ್ದಾಗ ನೀವು ವಿರೋಧ ಮಾಡುವುದು ಸರಿಯಲ್ಲ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್,‌ ಈ ರೀತಿ ಹೇಳಬೇಡಿ, ಕಾನೂನು ಏನಿದೆಯೋ ಆ ರೀತಿ ಮಾಡಬೇಕು, ಯಾರು ಎಲ್ಲಿದ್ದಾರೆ ಎನ್ನುವುದು ಮುಖ್ಯವಲ್ಲ ಎಂದರು.

ಮಾತು ಮುಂದುವರೆಸಿದ ಸಚಿವ ಅಶೋಕ್, ರಾಜಕಾರಣ ಬಿಟ್ಟು ನಾವೆಲ್ಲಾ ಒಂದು ತೀರ್ಮಾನ ಮಾಡಿದರೆ ಕೆರೆಗಳು ಉಳಿಯಲಿವೆ. ಕೆರೆಗಳ ನಶಿಸಿರುವುದರಿಂದ ವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ ಎಂದರು.

ನಮ್ಮ ಯಾವ ಸರ್ಕಾರಗಳು ಕೆರೆ ಕಟ್ಟಿಲ್ಲ – ಅಶೋಕ್ ಆರೋಪ

ನಮ್ಮ ಯಾವ ಸರ್ಕಾರಗಳೂ ಒಂದೇ ಒಂದು ಕೆರೆ ಕಟ್ಟಿಲ್ಲ, ರಾಜ ಮಹಾರಾಜರು ಕಟ್ಟಿದ ಕರೆಗಳನ್ನೇ ನಮ್ಮಲ್ಲಿ ಉಳಿಸಿಕೊಳ್ಳಲು ಆಗುತ್ತಿಲ್ಲ, ಹಳ್ಳಿಗಳ ಕಡೆ ಕೆರೆ ಒತ್ತುವರಿ ಕಡಿಮೆ ಆದರೆ ಬೆಂಗಳೂರಿನಲ್ಲಿ ಹೆಚ್ಚು. ಹಾಗಾಗಿ ಪ್ರತಿ ಶನಿವಾರ ಇಡೀ ದಿನ‌ ಡಿಸಿಗಳು ಕೆರೆ ಒತ್ತುವರು ತೆರವು ಕಾರ್ಯ ಮಾಡಬೇಕು ಎಂದು ಸೂಚಿಸಲಾಗಿದೆ. ಕೆರೆ ಒತ್ತುವರಿ ತೆರವಿಗೆ ದಿಟ್ಟಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಬೆಂಗಳೂರು ಕೆರೆ ಒತ್ತುವರಿ ವಿವರ ಹೀಗಿದೆ : ಬೆಂಗಳೂರು ನಗರ ಜಿಲ್ಲೆ ಯಲ್ಲಿ ಒಟ್ಟು ಕೆರೆಗಳ ಸಂಖ್ಯೆ-837, ಒತ್ತುವರಿ ಕೆರೆ-744, ತೆರವು ಮಾಡಿದ ಕೆರೆ-360, ತೆರವು ಬಾಕಿ ಕರೆ-384, ಒತ್ತುವರಿ ಮುಕ್ತ ಕೆರೆ-93.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು ಕೆರೆಗಳ ಸಂಖ್ಯೆ -710, ಒತ್ತುವರಿ ಕೆರೆ-643, ತೆರವು ಮಾಡಿದ ಕೆರೆ-544, ತೆರವು ಬಾಕಿ ಕರೆ -99., ಒತ್ತುವರಿ ಮುಕ್ತ ಕೆರೆ -67.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಕೆರೆಗಳ ಸಂಖ್ಯೆ:160, ಒತ್ತುವರಿ ಕೆರೆ -148, ತೆರವು ಮಾಡಿದ ಕೆರೆ-20, ತೆರವು ಬಾಕಿ ಕರೆ-128,

ಒತ್ತುವರಿ ಮುಕ್ತ ಕೆರೆ- 12.

ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿ ಒತ್ತುವರಿಯಿಂದ ಬಿಟ್ಟಿದ್ದು ಕೇವಲ 20 ಕೆರೆಗಳು ಮಾತ್ರ. ಒಟ್ಟು 160 ರಲ್ಲಿ 140 ಕೆರೆಗಳು ಒತ್ತುವರಿಯಾಗಿವೆ ಎಂದು ಸರ್ಕಾರವೇ ಅಂಕಿ ಅಂಶಗಳ ಮೂಲಕ ಬಹಿರಂಗಪಡಿಸಿದೆ.

More News

You cannot copy content of this page