ಬೆಂಗಳೂರು ನಗರದಲ್ಲಿ ಮತ್ತೊಂದು ಬೆಂಕಿ ಅನಾಹುತ: ಸ್ಫೋಟದಿಂದ ಛಿದ್ರ ಛಿದ್ರವಾದ ಮೂವರ ದೇಹ

ಬೆಂಗಳೂರು : ಅಪಾರ್ಟ್ ಮೆಂಟ್ ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಇನ್ನೊಂದು ಬೆಂಕಿ ಅನಾಹುತ ಸಂಭವಿಸಿದ್ದು, ಮೂವರು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದಾರೆ.

ನಗರದ ಹೃದಯಭಾಗದಲ್ಲಿರುವ ನಗರ್ತರ್ ಪೇಟೆಯಲ್ಲಿನ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಬೆಂಕಿಗೆ ಆಹುತಿಯಾಗಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ವಿವಿ ಪುರಂ ಪೊಲೀಸರು, ಮೂರು ಅಗ್ನಿಶಾಮಕ ವಾಹನದ ಸಿಬ್ಬಂದಿ ದೌಡಾಯಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

ಬ್ಲಾಸ್ಟ್ ನ ತೀವ್ರತೆಗೆ ಚಿದ್ರ ಚಿದ್ರವಾದ ದೇಹಗಳು, ಕಟ್ಟಡ ಮುಂದೆ ನಿಲ್ಲಿಸಿದ್ದ ಬೈಕ್‌ ಗಳು ಸಂಪೂರ್ಣ ಜಖಂಗೊಂಡಿವೆ. ಶ್ರೀ ಮಹಾಕಾಳಿ ಅಮ್ಮನ್ ಲಾರಿ ಸರ್ವಿಸ್ ಗೋದಾಮುನಲ್ಲಿ ಈ  ಘಟನೆ ಸಂಭವಿಸಿದೆ. ಘಟನಾ ಸ್ಥಳದಿಂದ ಗೋದಾಮು ಮಾಲೀಕ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕ ಜಮೀರ್ ಅಹಮದ್ ಅಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಒಟ್ಟು ಮೂವರು ಮೃತಪಟ್ಟರೆ, ಐದು ಮಂದಿಗೆ ಗಂಭೀರಸ್ವರೂಪದ ಗಾಯಗಳಾಗಿವೆ. ಮೃತರು ಹಾಗೂ ಗಾಯಾಳು ಎಲ್ಲರೂ ಸ್ಥಳೀಯರಾಗಿದ್ದಾರೆ. ಘಟನೆಯಲ್ಲಿ ಮೃತರಾದ ಮೂವರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹಾಗೆಯೇ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಚಿಕಿತ್ಸಾ ವೆಚ್ಚ ಭರಿಸುವುದಾಗಿ ಜಮೀರ್ ತಿಳಿಸಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದಿದ್ದಾರೆ.

ಈ ಘಟನೆ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಎಫ್ ಎಸ್ ಎಲ್ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಅಗ್ನಿ ಶಾಮಕದಳದವರು ಮತ್ತು ಪೋಲಿಸರು ಸ್ಥಳಕ್ಕೆ ಹೋಗಿದ್ದಾರೆ, ಘಟನೆ ಸಂಬಂಧ ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಹುಶ ಅದು ಪಟಾಕಿ ಸ್ಪೋಟಿಸಿರುವುದರಿಂದ ಈ ಘಟನೆ ಸಂಭವಿಸಿರಬಹುದು, ದೀಪಾವಳಿ ಹಬ್ಬ ಹತ್ತಿರ ಬರುತ್ತಿರುವುದರಿಂದ ಸಾಕಷ್ಟು ಪಟಾಕಿಗಳು ಗೋಡನ್ ಗೆ ಬರ್ತಿರಬಹುದು, ಸ್ಪೋಟಕ್ಕೆ ಇದೇ ಕಾರಣವಿರಬಹುದು ಎಂದು ಸಚಿವರು ತಿಳಿಸಿದ್ದಾರೆ.

More News

You cannot copy content of this page