ಪ್ರತಿ ನಗರಪಾಲಿಕೆಯಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ : ಬೆಳಗಾವಿಯ ಇ- ಗ್ರಂಥಾಲಯ ಕಾರ್ಯವೈಖರಿಯನ್ನು ಗಮನಿಸಿ, ಅದು  ಯಶಸ್ವಿಯಾದಲ್ಲಿ, ಇದೇ ಮಾದರಿಯಲ್ಲಿ  ಪ್ರತಿಯೊಂದು ಮಹಾನಗರ ಪಾಲಿಕೆಯಲ್ಲಿ  ಇ- ಗ್ರಂಥಾಲಯ ತೆರೆಯಲು ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಳಗಾವಿಯಲ್ಲಿ ದೇಶಭಕ್ತ ರವೀಂದ್ರ ಕೌಶಿಕ್ ಅವರ ಹೆಸರಿನಲ್ಲಿ ಇ- ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಇಂದು ಮಾತನಾಡುತ್ತಾ,  ಡಿಜಿಟಲ್ ಗ್ರಂಥಾಲಯ ಓದುಗರಿಗೆ, ಬರಹಗಾರರಿಗೆ, ಜ್ಞಾನ ಪಡೆಯಲು ಬಯಸುವವರಿಗೆ ಜ್ಞಾನದ ರಹದಾರಿಯನ್ನು ತೆರೆದಿದೆ.  ಇದರಿಂದ ಡಿಜಿಟಲ್ ಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗುತ್ತದೆ  ಎಂದರು.  ಜ್ಞಾನ ನೀಡುವುದು  ಮತ್ತು ಪಡೆಯುವುದು ಅತ್ಯಗತ್ಯ ಎಂದರು.

ಜ್ಞಾನ ಮತ್ತು ಧ್ಯಾನ ಇವೆರಡು ಬದುಕಿಗೆ ಸಾರ್ಥಕತೆ ಕೊಡುವ, ಅರ್ಥವನ್ನು ಕೊಡುವ, ಪರೋಪಕಾರ ಮಾಡುವ ಗುಣವನ್ನು ಕೊಡುವ ಪ್ರಮುಖ ಮಾರ್ಗವಾಗಿದೆ. ಜ್ಞಾನ ಮತ್ತು ಧ್ಯಾನಗಳನ್ನು ಪಡೆದು ಅದನ್ನು ಸಮಾಜಕ್ಕೆ ಹಂಚಬೇಕು ಎಂಬ ಕೆಲಸವನ್ನು ಗ್ರಂಥಾಲಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಳಗಾವಿ  ಕಾಸ್ಮೋಪಾಲಿಟನ್  ನಗರ. ಇಡೀ ಭಾರತವೇ ಬೆಳಗಾವಿಯಲ್ಲಿದೆ. ಬೆಳಗಾವಿ ಜನತೆ ಕನ್ನಡ ಮತ್ತು ರಾಷ್ಟ್ರದ ಬಗ್ಗೆ  ಅಭಿಮಾನವಿರುವವರು. ಸಂಕುಚಿತ ಭಾವನೆ ಮಾತ್ತು ವಿಚಾರಗಳಿಗೆ ಬೆಳಗಾವಿಯಲ್ಲಿ ಜಾಗ ಇಲ್ಲ ಎಂದು ನಿರೂಪಿಸಿದ್ದು,  ಹೃದಯ ಶ್ರೀಮಂತಿಕೆ ಇರುವವರು. ಮಹಾನಗರ ಪಾಲಿಕೆಯ ನೂತನ ಸದಸ್ಯರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಆ ಜವಾಬ್ದಾರಿಯನ್ನು ಉಳಿಸಿ, ಮಹಾನಗರ ಪಾಲಿಕೆ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸ್ಮಾರ್ಟ್ ಸಿಟಿಯಲ್ಲಿ ಬೆಳಗಾವಿ ಮೊದಲ ಸ್ಥಾನ ಪಡೆಯಲಿ

ಸ್ಮಾರ್ಟ್ ಸಿಟಿಯಲ್ಲಿ ಬೆಳಗಾವಿ ರಾಜ್ಯದಲ್ಲಿ 2 ನೇ ಸ್ಥಾನದಲ್ಲಿದೆ. ಬೆಳಗಾವಿ ಮೊದಲ ಸ್ಥಾನ ಪಡೆಯಬೇಕೆನ್ನುವುದು ನಮ್ಮ ಆಶಯ. ಅದಕ್ಕೆ ಪೂರಕವಾಗಿ ಸರ್ಕಾರ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು. ಅಭಯ್ ಪಾಟೀಲ್ ಮತ್ತು ಅನಿಲ್  ಬೆಣಕೆ ಅಂತಹ ಶಾಸಕರಿದ್ದಾಗ ಬೆಳಗಾವಿ ಮೊದಲ ಸ್ಥಾನ ಪಡೆಯಬೇಕು. ಅವರ ವೇಗಕ್ಕೆ ತಕ್ಕ ಹಾಗೆ ಕೆಲಸ ಮಾಡಲಾಗುವುದು.

ಬೆಳಗಾವಿ ಜಿಲ್ಲೆ ನಾಯಕರಿಂದ ಕೂಡಿರುವ ಜಿಲ್ಲೆ. ಶಿಕ್ಷಣ ತಜ್ಞರು,  ಕಾರ್ಖಾನೆಗಳ ಮಾಲೀಕರು ಇದ್ದಾರೆ. ಗೋವಿಂದ ಕಾರಜೋಳರಂಥ ಹಿರಿಯರ ಅನುಭವದ  ಮಾರ್ಗದರ್ಶನ ದೊರಕುತ್ತಿದೆ. ಬೆಳಗಾವಿ ನಗರಪಾಲಿಕೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ  ಯಶಸ್ಸು ಸಿಗಲು ಗೋವಿಂದ ಕಾರಜೋಳ ಅವರ ಪಾತ್ರ ಮಹತ್ವದ್ದು ಎಂದರು.

ದೇಶಭಕ್ತ ರವೀಂದ್ರ ಕೌಶಿಕ್ ಅವರ ಸಾಹಸಮಯ ಜೀವನ, ಅವರ ನೋವು, ಯಾತನೆ, ಸಹನಾ ಶಕ್ತಿ ಅಪಾರ.  ಅವರ ನೆನಪಿನಲ್ಲಿ 2.50 ಕೋಟಿ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಮಾಡಿರುವುದು ಅತ್ಯಂತ ಯೋಗ್ಯವಾಗಿದೆ ಎಂದರು.

ಸಮಾರಂಭದಲ್ಲಿ ಸಚಿವ ಬಿ.ಎ.ಬಸವರಾಜ, ಗೋವಿಂದ ಕಾರಜೋಳ, ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಮೊದಲಾದವರು ಹಾಜರಿದ್ದರು.

More News

You cannot copy content of this page