ಸಂಶೋಧನೆ ಮತ್ತು ಅಭಿವೃದ್ಧಿಗೆ ಹೊಸ ನೀತಿ ರೂಪಿಸಲು ಕಾರ್ಯಪಡೆ ರಚನೆ: ಸಿಎಂ

ಹುಬ್ಬಳ್ಳಿ: ಕೃಷಿ, ತೈಲ, ಕೈಗಾರಿಕೆ ಮತ್ತಿತರ ಎಲ್ಲಾ ರಂಗಗಳಲ್ಲಿ ಇಂದು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಅಗತ್ಯವಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ 180 ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಅವುಗಳಿಗೆ ಹೆಚ್ಚು ಮಹತ್ವ ನೀಡಿ, ಕೈಗಾರಿಕೆ, ಕೃಷಿ, ಆಹಾರ ರಂಗದಲ್ಲಿ ಆರ್ ಆ್ಯಂಡ್ ಡಿ ಬಳಕೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75 ನೇ ವರ್ಷಾಚರಣೆ ಹಾಗೂ ಕೆಎಲ್‌ಇ ಟೆಕ್‌ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡುತ್ತಾ, ಹೊಸ ಆರ್ ಆ್ಯಂಡ್ ಡಿ ನೀತಿ ರಚನೆಗೆ  ಕಾರ್ಯಪಡೆ ಅಧ್ಯಕ್ಷರನ್ನಾಗಿ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಉಪಕುಲಪತಿ ಡಾ.ಅಶೋಕ ಶೆಟ್ಟರ್ ಅವರನ್ನು ನೇಮಿಸಲು ಚಿಂತನೆ ನಡೆದಿದೆ ಎಂದರು.

ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಕೆಎಲ್‌ಇ ಟೆಕ್‌ಪಾರ್ಕಿನ ಅಭಿವೃದ್ಧಿಗೆ ಅಗತ್ಯವಾಗಿರುವ ಇನ್ನೂ 2 ಕೋಟಿ ರೂ.ಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ಕ್ರೋಢೀಕರಿಸಿ ನೀಡಲಾಗುವುದು. ಸ್ಟಾರ್ಟ್ ಅಪ್‌ಗಳ ಉತ್ತೇಜನಕ್ಕಾಗಿ ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಪ್ರಾದೇಶಿಕ ಕಚೇರಿಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ದೊಡ್ಡದು. ಯುವಕರಲ್ಲಿ ವಿದ್ಯೆ, ವ್ಯಕ್ತಿತ್ವ ನಿರ್ಮಾಣ ಮಾಡುವುದು ಸಂಸ್ಥೆ, ಸರ್ಕಾರಗಳ ಜವಾಬ್ದಾರಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸಂಸ್ಥೆಗೆ, ಸಮಾಜಕ್ಕೆ  ಉತ್ತಮ ಮಾನವ ಸಂಪನ್ಮೂಲವಾಗಿ ಕೊಡುಗೆಗಳನ್ನು ಮರಳಿ ನೀಡಬೇಕು ಎಂದರು.

ಇಂದು ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಸಂಪೂರ್ಣ ಸ್ವರೂಪವೇ ಬದಲಾಗಿದ್ದು, ಮತ್ತೊಮ್ಮೆ ವಿದ್ಯಾರ್ಥಿಯಾಗಿ ಪ್ರವೇಶ ಪಡೆಯಲು ಮನಸ್ಸಾಗುತ್ತಿದೆ ಎಂದು ತಮಗೆ ವಿದ್ಯೆ ನೀಡಿದ ಸರಸ್ವತಿ ದೇಗುಲದ ಬಗ್ಗೆ ಮನದುಂಬಿ ಮಾತನಾಡಿದ ಮುಖ್ಯಮಂತ್ರಿ, ತಮಗೆ ಕಲಿಸಿದ ಪ್ರಾಧ್ಯಾಪಕರು, ಹಿರಿಯ-ಕಿರಿಯ ಸಹಪಾಠಿಗಳನ್ನು, ಹಾಜರಾಗದ ಪ್ರಯೋಗಾಲಯಗಳು, ಪುಸ್ತಕ ಪಡೆಯದ ಗ್ರಂಥಾಲಯಗಳು, ಹಾಸ್ಟೆಲು, ಕ್ಯಾಂಪಸ್, ಕ್ಯಾಂಟೀನ್ ಎಲ್ಲವನ್ನೂ ನೆನಪಿಸಿಕೊಂಡರು.

ರಾಜಕೀಯವೂ ಒಂದು ವಿಜ್ಞಾನವೇ ಆಗಿದೆ ಅಲ್ಲಿಯೂ ವೈಜ್ಞಾನಿಕ ವಿಧಾನಗಳಿವೆ. ತಾಂತ್ರಿಕ ಹಾಗೂ ವೈಜ್ಞಾನಿಕ ಸಂಶೋಧನೆಗಳನ್ನು ರಾಜತಾಂತ್ರಿಕವಾಗಿ ಬಳಸುವುದು ರಾಜಕೀಯ ವಿಜ್ಞಾನವಾಗಿದೆ. ಎಲ್ಲಾ ದೇಶಗಳು ಈ ನೀತಿ ಪಾಲಿಸಬೇಕು‌. ಕರ್ತವ್ಯವನ್ನು ನೈತಿಕತೆಯ ತಳಹದಿಯೊಂದಿಗೆ ಕಾಯಕದ ರೀತಿಯಲ್ಲಿ ನಿರ್ವಹಿಸಬೇಕು. ದೇಶದ ಬಡತನ, ಆರೋಗ್ಯ, ಶಿಕ್ಷಣ, ಆರ್ಥಿಕ ಸವಾಲುಗಳನ್ನು ಅರಿಯಲು ನಾವು ಸದಾ ಕಾಲ ಜನರ ನಡುವೆ ಇರಬೇಕು, ಅದೇ ಜನರ, ಜನಪರ ರಾಜಕೀಯವಾಗಿದೆ ಎಂದರು.

ಬೃಹತ್ ,ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ, ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ್ ಪಾಟೀಲ ಮುನೇನಕೊಪ್ಪ, ಕೆಎಲ್‌ಇ ತಾಂತ್ರಿಕ ವಿವಿ ಉಪಕುಲಪತಿ ಡಾ.ಅಶೋಕ ಶೆಟ್ಟರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

More News

You cannot copy content of this page