ಬೆಂಗಳೂರು : ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದೆ. ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಬೇಕೆಂಬುದು ಮುಖ್ಯಮಂತ್ರಿ ಅವರ ಅಭಿಲಾಷೆ. ಆದರೆ ಅದು ಅಷ್ಟೊಂದು ಸುಲಭವಾಗಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ನೇರ ಸ್ಪರ್ಧೆ ನೀಡುವುದು ಖಚಿತವಾಗಿದೆ.
ಹಾನಗಲ್ ವಿಧಾನ ಸಭಾ ಕ್ಷೇತ್ರವಂತೂ ಭಾರತೀಯ ಜನತಾ ಪಕ್ಷದ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಸಿ. ಎಂ. ಉದಾಸಿಯವರ ಅಗಲಿಕೆಯಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿದೆ.
ಉತ್ತರ ಕರ್ನಾಟಕ ಭಾಗದ ಹೆಮ್ಮೆಯ ಕುಮಾರವ್ಯಾಸರ ನಾಡು ಎಂದೇ ಖ್ಯಾತಿ ಪಡೆದಿದೆ ಹಾನಗಲ್. ಇಲ್ಲಿ ಉಪ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಟಿಕೆಟ್ ಗಾಗಿ ಕೈ ಹಾಗೂ ಕಮಲ ಪಾಳೆಯದಲ್ಲಿ ದೊಡ್ಡ ಮಟ್ಟದ ಲಾಭಿ ಶುರುವಾಗಿದೆ. ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಮಾಜಿ ಸಚಿವ ಮನೋಹರ ತಹಶಿಲ್ದಾರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್ ನಿಂದ ಶೇಖ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಅಲ್ಲದೇ ಬಿಜೆಪಿಯಿಂದ ಇದುವರೆಗೂ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ.
ಇನ್ನೂ ಹಾನಗಲ್ ವಿಧಾನಸಭಾ ಕ್ಷೇತ್ರವನ್ನ ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಅಭಿಲಾಷೆಯಿಂದ ಬಿಜೆಪಿ ಶತಾಯು ಗತಾಯು ಹೋರಾಟ ನಡೆಸಿ, ಸಮರ್ಥ ಅಭ್ಯರ್ಥಿಯ ಆಯ್ಕೆಯಲ್ಲಿ ತೊಡಗಿದೆ. ಈಗಾಗಲೇ ದಾವಣಗೆರೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿಯೂ ಕೂಡ ಸಾಕಷ್ಟು ಚರ್ಚೆಗಳನ್ನು ಮಾಡಲಾಗಿದೆ. ಆದರೆ ಅಲ್ಲಿಯೂ ಅಭ್ಯರ್ಥಿಗಳ ಪಟ್ಟಿ ಪೈನಲ್ ಆಗಿಲ್ಲ.
ಆದರೆ ಲೋಕಸಭಾ ಸದಸ್ಯ ಶಿವಕುಮಾರ್ ಉದಾಶಿ ಪತ್ನಿ ರೇವತಿ ಉದಾಶಿ ಟಿಕೆಟ್ ಆಕಾಂಕ್ಷಿಯಾಗಿದ್ದು, ರೇವತಿ ಉದಾಸಿ ಕಣಕ್ಕಿಳಿಯುವುದು ಬಹುತೇಕ ಫೈನಲ್ ಎನ್ನಲಾಗಿದ್ದು, ಟಿಕೆಟ್ ಘೋಷಣೆ ಮಾತ್ರ ಬಾಕಿ ಉಳಿದಿದೆ. ಈ ನಿಟ್ಟಿನಲ್ಲಿ ಕಳೆದ ಕೆಲವು ತಿಂಗಳಿಂದ ಕ್ಷೇತ್ರದಲ್ಲಿ ಶಿವಕುಮಾರ್ ಉದಾಸಿ ಬಿಡುಬಿಟ್ಟಿದ್ದಾರೆ.
ಕಾಂಗ್ರೆಸ್ ನಿಂದ ಶ್ರೀನಿವಾಸ್ ಮಾನೆಗೆ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಹಾನಗಲ್ ನಲ್ಲಿ ಕೂಡ ಶ್ರೀನಿವಾಸ ಮಾನೆ ಬಿಡು ಬಿಟ್ಟಿದ್ದಾರೆ. ಕಳೆದ ಬಾರಿ ಸಿಎಂ ಉದಾಸಿ ವಿರುದ್ದ ಶ್ರೀನಿವಾಸ ಮಾನೆ ಸೋತಿದ್ದರು. ಆದ್ದರಿಂದ ಈ ಬಾರಿ ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ಅರ್ಹರನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸುತ್ತಿದೆ.
ಒಟ್ಟಿನಲ್ಲಿ ಕಮಲ ಪಡೆಯ ಭದ್ರಕೋಟೆ ಹಾನಗಲ್ ವಿಧಾನಸಭಾ ಚುನಾವಣೆ ಗೆಲುವಿಗೆ ಬಿಜೆಪಿ ಸಾಕಷ್ಟು ಶ್ರಮವಹಿಸಿತ್ತಿದ್ದು, ಎಲ್ಲೆಡೆಯೂ ಟಿಕೆಟ್ ಆಕಾಂಕ್ಷಿತರ ಲಾಭಿ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಯಾರ ಮುಡಿಗೆ ಹೋಗುತ್ತದೇ ಎಂಬುವುದನ್ನು ಕಾದು ನೋಡಬೇಕಿದೆ.